LATEST NEWS
ಹರಕೆ, ಕೋಲವನ್ನು ಗೌರವಿಸುವುದು ನಮ್ಮ ಸಂಸ್ಕೃತಿ -ಸೋಶಿಯಲ್ ಮೀಡಿಯಾದಲ್ಲಿ ಗೀಚಿದ್ದಕ್ಕೆ Importance ಕೋಡಬೇಕಾಗಿಲ್ಲ – ಖಾದರ್
ಬೆಂಗಳೂರು ಫೆಬ್ರವರಿ 06: ಹರಕೆಯ ಕೋಲದಲ್ಲಿ ಭಾಗಿಯಾಗಿದ್ದ ಸ್ಪೀಕರ್ ಖಾದರ್ ವಿರುದ್ದ ಮುಸ್ಲಿಂ ಮುಖಂಡರೊಬ್ಬರು ಟೀಕಿಸಿದ್ದಕ್ಕೆ ಸ್ಪೀಕರ್ ಖಾದರ್ ತಿರುಗೇಟು ನೀಡಿದ್ದು, ಯಾರೋ ಒಂದಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಏನೋ ಗೀಚಿದ ಮಾತ್ರಕ್ಕೆ ನಮ್ಮ ಸಂಪ್ರದಾಯ ಬದಲಾಗಲ್ಲ. ನನ್ನ ಕೆಲಸವನ್ನು ನೂರಾರು ಮಂದಿ ಸ್ವೀಕಾರ ಮಾಡುತ್ತಾರೆ, ಗೌರವಿಸುತ್ತಾರೆ. ನಾವು ಮಾಡೋ ಕೆಲಸಗಳನ್ನು ಮಾತ್ರ ಇತಿಹಾಸ ನೆನಪಿಡುತ್ತದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅವರ ಇಚ್ಚೆಯಂತೆ ಹರಕೆ ಹೇಳಿಕೊಂಡಿದ್ದರು. ಅದಕ್ಕೆ ಹೋಗಿದ್ದೇನೆ, ಹರಕೆ, ಕೋಲವನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಎಂದು ಸ್ಪೀಕರ್ ಯುಟಿ ಖಾದರ್ ಸ್ಪಷ್ಟನೆ ನೀಡಿದ್ದಾರೆ.
ಯಾರೋ ಒಬ್ಬ ಸೋಶಿಯಲ್ ಮೀಡಿಯಾದಲ್ಲಿ ಗೀಚುವರರನ್ನು ಇತಿಹಾಸ ನೆನಪಿಟ್ಟುಕೊಳ್ಳುವುದಿಲ್ಲ, ಯಾರು ಕೆಲಸ ಮಾಡುತ್ತಾರೋ ಅವರನ್ನು ಮಾತ್ರ ಇತಿಹಾಸ ನೆನಪಿಟ್ಟುಕೊಳ್ಳುತ್ತೆ. ಒಬ್ಬ ಹೇಳಿದ ಅಂತ ಎಲ್ಲರೂ ಹೇಳುವುದಿಲ್ಲ. ಅವರ ಮಾತಿಗೆ ಬೆಲೆ ಕೋಡಬೇಕಾಗಿಲ್ಲ ಎಂದರು. ಅದರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಎಲ್ಲ ಸಂಸ್ಕೃತಿಗೆ ಗೌರವ ಕೋಡಬೇಕು ಎಂದರು.
ಪಣೋಲಿಬೈಲಿನಲ್ಲಿ ಹರಕೆ ಕೋಲದಲ್ಲಿ ಭಾಗವಹಿಸಿದ ಯುಟಿ ಖಾದರ್ ಬಗ್ಗೆ ಫೇಸ್ಬುಕ್ ನಲ್ಲಿ ಸಾಲೆತ್ತೂರಿನ ಧರ್ಮಗುರು ಫೈಝಿ ಅಲ್ ಹಮ್ದಾನಿ ಎಂಬವರು ಟೀಕಿಸಿ ಬರೆದಿದ್ದರು. ಕೊರಗಜ್ಜನ ಭಕ್ತ ಯುಟಿ ಖಾದರ್ ಅವರನ್ನು ಮುಸ್ಲಿಮರು ಕೇವಲ ರಾಜಕಾರಣಿಯಾಗಿ ಕಂಡರೆ ಸಾಕು. ಧಾರ್ಮಿಕ ಮುಖಂಡರಾಗಿ ಕಾಣುವುದು ಬೇಡ. ಉಲೆಮಾ, ಸಾತ್ವಿಕರು ತುಂಬಿದ ಧಾರ್ಮಿಕ ವೇದಿಕೆಗೆ ಮುಸ್ಲಿಂ ನಾಯಕನಾಗಿ ಹತ್ತಿಸುವುದು ತರವಲ್ಲ. ಅದು ಆತನ ಭೂತಾರಾಧನೆಗೆ ನಾವು ಕೊಡುವ ಅಂಗೀಕಾರವಾಗುತ್ತದೆ. ಖಾದರ್ ಕೊರಗಜ್ಜನಿಗೂ ಕಲ್ಲುರ್ಟಿ ಪಂಜುರ್ಲಿಗೂ ಆರಾಧಿಸಲಿ. ಪ್ರಸಾದ ಪಡೆದು ತಲೆಗೆ ಮೆತ್ತಿಕೊಂಡು ನರಕಕ್ಕೆ ಹೋಗಲಿ. ಅದು ಆತನ ವೈಯಕ್ತಿಕ ಸ್ವಾತಂತ್ರ್ಯ. ಅದನ್ನು ಭಾರತದಲ್ಲಿ ತಡೆಯುವ ಸ್ವಾತಂತ್ರ್ಯ ತನಗೆ ಇಲ್ಲ. ಆದರೆ ಆತನಿಗೆ ಉಲೆಮಾಗಳು ಗೌರವಿಸುವುದು ಕೆಟ್ಟ ಸಂದೇಶ ನೀಡುತ್ತದೆ ಎಂದು ಹೇಳಿದ್ದರು.