LATEST NEWS
ಯಾವುದೇ ಸಹಾಯಕ್ಕೂ ಬಾರದ ಮಂಗಳೂರಿನ ಕೋಸ್ಟ್ ಗಾರ್ಡ್
ಯಾವುದೇ ಸಹಾಯಕ್ಕೂ ಬಾರದ ಮಂಗಳೂರಿನ ಕೋಸ್ಟ್ ಗಾರ್ಡ್
ಮಂಗಳೂರು ಅಗಸ್ಟ್ 18: ಸಮುದ್ರ ಕರಾವಳಿ ತೀರದಲ್ಲಿ ಹೈ ಎಲರ್ಟ್ ಘೋಷಣೆಯಾಗಿರುವ ಸಂದರ್ಭದಲ್ಲಿ ಕರಾವಳಿಯಲ್ಲಿ ಪಹರೆ ನಡೆಸೋದು ಕೋಸ್ಟ್ ಗಾರ್ಡ್ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ ಈ ಕೋಸ್ಟ್ ಗಾರ್ಡ್ ಇಲಾಖೆಯು ತಮ್ಮ ಜವಾಬ್ದಾರಿಯನ್ನು ಮರೆತರೆ, ಸಮುದ್ರದಲ್ಲಿ ಆಗುವ ಅನಾಹುತವನ್ನು ತಪ್ಪಿಸೋದು ಯಾರು ಎನ್ನುವ ಪ್ರಶ್ನೆಯೀಗ ಮುಡಿದೆ.
ಮಂಗಳೂರು ಬಂದರಿನಿಂದ ಹೊರಟ ಮೀನುಗಾರಿಕಾ ಬೋಟೋಂದು ಸಮುದ್ರ ಮಧ್ಯಭಾಗದಲ್ಲಿ ಕೆಟ್ಟು ನಿಂತ ಸಂದರ್ಭದಲ್ಲಿ ರಕ್ಷಣೆಗಾಗಿ ಕೋಸ್ಟ್ ಗಾರ್ಡ್ ಇಲಾಖೆಗೆ ಮಾಹಿತಿ ನೀಡಿದರೂ, ಇಲಾಖೆ ಮಾತ್ರ ಸ್ಪಂದಿಸದೆ ಕುಳಿತ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಅಗಸ್ಟ್ 13 ರಿಂದ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ದಕ್ಷಿಣಕನ್ನಡ ಜಿಲ್ಲಾಡಳಿತವು ಸೂಚನೆಯನ್ನು ನೀಡಿದ ಹಿನ್ನಲೆಯಲ್ಲಿ ಈ ಹಿಂದೆಯೇ ಮೀನುಗಾರಿಕೆಗೆ ಹೋಗಿದ್ದ ಬೋಟ್ ಗಳು ಹಿಂದಿರುಗಿ ಬರುತ್ತಿತ್ತು. ಈ ಆದೇಶದ ಹಿನ್ನಲೆಯಲ್ಲಿ ಬಂದರಿಗೆ ಹಿಂದಿರುಗಿ ಬರುತ್ತಿದ್ದ ಜೈಬ್ ಅನಾಮ್ ಎನ್ನುವ ಬೋಟ್ ಅಗಸ್ಟ್ 14 ರ ಬೆಳಿಗ್ಗೆ 8 ಗಂಟೆಗೆ ಸಮುದ್ರದಲ್ಲಿ 16 ನಾಟಿಕಲ್ ಮೈಲ್ ದೂರದಲ್ಲಿ ಕೆಟ್ಟು ನಿಂತಿತ್ತು.
ಉಡುಪಿಯ ಮಲ್ಪೆ ಭಾಗದಲ್ಲಿ ಈ ಬೋಟ್ ಕೆಟ್ಟು ನಿಂತ ಕಾರಣಕ್ಕಾಗಿ ಬೋಟ್ ನ ಮಾಲಕರು ಮಲ್ಪೆಯ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೂ, ಮಂಗಳೂರಿನ ಅಧಿಕಾರಿಗಳಿಗೂ ಮಾಹಿತಿಯನ್ನು ನೀಡಿದ್ದರು. ಈ ಸಂಬಂಧ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಕೋಸ್ಟ್ ಗಾರ್ಡ್ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿ ಬೋಟನ್ನು ರಕ್ಷಿಸುವಂತೆ ಕೇಳಿ ಕೊಂಡಿದ್ದರು. ಆದರೆ ಇಲಾಖೆ ಮಾತ್ರ ಮಧ್ಯಾಹ್ನ 3 ಗಂಟೆಯವರೆಗೂ ಯಾವುದೇ ಕಾರ್ಯಾಚರಣೆಯನ್ನು ನಡೆಸಿಲ್ಲ.
ಬೋಟ್ ನಲ್ಲಿ 9 ಜನ ಸಿಬ್ಬಂದಿಗಳು ಸಮುದ್ರದ ನಡುವೆ ಜೀವರಕ್ಷಣೆಗಾಗಿ ಪರದಾಡುತ್ತಿದ್ದನ್ನು ಸಹಿಸದ ಬೋಟ್ ಮಾಲಕ ಇನ್ನೊಂದು ಬೋಟ್ ಮೂಲಕ ಸಮುದ್ರಕ್ಕೆ ತೆರಳಿ ಕಾಸರಗೋಡು ವ್ಯಾಪ್ತಿಯಲ್ಲಿ ಬೋಟನ್ನು ನಿಲ್ಲಿಸಿ , ತಾಂತ್ರಿಕ ತೊಂದರೆಯನ್ನು ನಿವಾರಿಸಿ ಮತ್ತೆ ಮಂಗಳೂರು ಬಂದರಿಗೆ ಕರೆತಂದಿದ್ದಾರೆ.
ಆದರೆ ಇಷ್ಟೆಲ್ಲಾ ಕಾರ್ಯಾಚರಣೆಯನ್ನು ಸ್ಥಳೀಯ ಬೋಟ್ ಸಿಬ್ಬಂದಿಗಳೇ ಮಾಡಿದ್ದರೂ, ಮೀನುಗಾರರ ರಕ್ಷಣೆಗಾಗಿಯೇ ಇರುವ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಮಾತ್ರ ಬೋಟ್ ನ ರಕ್ಷಣೆಗಾಗಿ ಬಂದೇ ಇಲ್ಲ ಎನ್ನುವ ಆರೋಪ ಎದುರಾಗಿದೆ. ಸಮುದ್ರದಲ್ಲಿ ಸಿಲುಕಿದ ಜೀವಗಳನ್ನು ತಕ್ಷಣಕ್ಕೆ ಸ್ಪಂದಿಸಿ ರಕ್ಷಿಸಲಾಗದ ಕೋಸ್ಟ್ ಗಾರ್ಡ್ ಇಲಾಖೆ ಇದ್ದರೆಷ್ಟು, ಇಲ್ಲದಿದ್ದರೆಷ್ಟು ಎನ್ನುವ ಪ್ರಶ್ನೆ ಮೀನುಗಾರರದ್ದಾಗಿದೆ.
ಕಳೆದ ಎರಡು ದಿನಗಳಿಂದ ಕರಾವಳಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಡಲಿನ ಅಬ್ಬರವೂ ಹೆಚ್ಚಾಗುತ್ತಿದೆ. ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡುವುದಕ್ಕೆ ಮೊದಲೇ ಆಳ ಸಮುದ್ರಕ್ಕೆ ತೆರಳಿದ ಹಲವು ಬೋಟುಗಳು ಈಗಲೂ ಸಮುದ್ರದಲ್ಲಿದ್ದು, ಇವುಗಳ ಸುರಕ್ಷತೆಯ ಬಗ್ಗೆಯೂ ಇದೀಗ ಅನುಮಾನಗಳು ಮೂಡಲಾರಂಭಿಸಿದೆ.