LATEST NEWS
ಚಡ್ಡಿ ಗ್ಯಾಂಗ್ ಹಿಡಿಯುವಲ್ಲಿ ಯಶಸ್ವಿಯಾದ ಉರ್ವಾ ಇನ್ಸ್ ಪೆಕ್ಟರ್ ಭಾರತಿ ಮತ್ತು ತಂಡಕ್ಕೆ 50 ಸಾವಿರ ಬಹುಮಾನ ; ಕಮಿಷನರ್ ಅಗರ್ವಾಲ್

ಮಂಗಳೂರು ಜುಲೈ 10: ಮಂಗಳೂರಿನಲ್ಲಿ ದರೋಡೆ ನಡೆಸಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದ ಚಡ್ಡಿಗ್ಯಾಂಗ್ ಸದಸ್ಯರು ಪಂಚನಾಮೆ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ ಈ ವೇಳೆ ಉರ್ವಾ ಪೊಲೀಸ್ ಇನ್ಸ್ ಪೆಕ್ಟರ್ ಭಾರತಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಮಂಗಳೂರಿನಲ್ಲಿ ದರೋಡೆ ನಡೆಸಿದ್ದ ಚಡ್ಡಿ ಗ್ಯಾಂಗಿನ ಸದಸ್ಯರನ್ನು ಕ್ಷಿಪ್ರವಾಗಿ ಅರೆಸ್ಟ್ ಮಾಡಲಾಗಿದ್ದು, ಅವರು ದರೋಡೆ ಕೃತ್ಯಕ್ಕೆ ಬಳಸಿದ್ದ ರಾಡ್ ಅನ್ನು ವಶಕ್ಕೆ ಪಡೆಯುವ ಸಲುವಾಗಿ ಆರೋಪಿಗಳನ್ನು ಮುಲ್ಕಿ ಬಳಿಯ ಪಡು ಪಣಂಬೂರಿಗೆ ಕರೆದೊಯ್ದಿದ್ದಾಗ ಇಬ್ಬರು ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದು ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದಾರೆ ಎಂದರು.

ಮಧ್ಯಪ್ರದೇಶದ ಗುಣಾ ಜಿಲ್ಲೆಯ ರಾಜು ಸಿಂಘಾನಿಯಾ(24) ಮತ್ತು ಮಾಧವ್ಗಡ್ ನಿವಾಸಿ ಬಾಲಿ (22) ಗುಂಡೇಟಿಗೆ ಒಳಗಾದವರು. ರಾಜು ಮೇಲೆ ತೊಡೆಯ ಭಾಗಕ್ಕೆ ಗುಂಡೇಟು ಬಿದ್ದಿದ್ದು, ಬಾಲಿ ಮೇಲೆ ಕಾಲಿಗೆ ಗುಂಡು ಬಿದ್ದಿದೆ. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೇ ವೇಳೆ, ಆರೋಪಿಗಳಿಂದ ಗಾಯಕ್ಕೀಡಾದ ಎಎಸ್ಐ ವಿನಯಕುಮಾರ್ ಮತ್ತು ಸಿಬಂದಿ ಶರತ್ ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಇನ್ನು ನಗರದಲ್ಲಿ ಸಾರ್ವಜನಿಕರು ತಮ್ಮ ಮನೆಗಳ ಮುಖ್ಯ ರಸ್ತೆಗಳಿಗೆ ಹಾಗೂ ಮನೆಗಳ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸಲಹೆ ನೀಡಿದ್ದಾರೆ.