ಉಪ್ಪಿನಂಗಡಿಯಲ್ಲಿ ಸರಣಿ ಕಳ್ಳತನ- ಸಿಸಿಟಿವಿಯಲ್ಲಿ ಸೆರೆ
ಪುತ್ತೂರು ಸೆಪ್ಟೆಂಬರ್ 27: ಒಂದೇ ರಾತ್ರಿ 8 ಕಡೆ ಸರಣಿ ಕಳ್ಳತನ ನಡೆದಿರುವ ಘಟನೆ ಪುತ್ತೂರಿನ ಉಪ್ಪಿನಂಗಡಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು ಇಲ್ಲಿಯ ಸರ್ಕಾರಿ ಪದವಿ ಕಾಲೇಜು ಸೇರಿದಂತೆ ಬ್ಯಾಂಕ್ ರಸ್ತೆಯಲ್ಲಿರುವ ಎಂಟು ಅಂಗಡಿಗಳಿಗೆ ಕಳ್ಳರು ನುಗ್ಗಿದ್ದಾರೆ.
ಬ್ಯಾಂಕ್ ರಸ್ತೆಯಲ್ಲಿರುವ ಮರ್ಚೆಂಟ್ ಅಂಗಡಿ, ಜೆರಾಕ್ಸ್ ಅಂಗಡಿ, ಫರ್ನಿಚರ್ ಅಂಗಡಿ ಸೇರಿದಂತೆ ಸುಮಾರು 8 ಅಂಗಡಿಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಇಲ್ಲಿಯ ಚಿನ್ನದ ಆಭರಣ ಮಳಿಗೆಗೆ ನುಗ್ಗುವ ವಿಫಲ ಯತ್ನ ಕಳ್ಳರು ನಡೆಸಿದ್ದಾರೆ.
ಕಳೆದ ರಾತ್ರಿ ಅಂಗಡಿಗೆ ನುಗ್ಗಿದ ಕಳ್ಳರ ಕರಾಮತ್ತು ಅಂಗಡಿಯೊಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ .ಈ ಘಟನೆಯ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಕಳ್ಳರ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ .
