LATEST NEWS
ಯುಪಿ ರಾಜಕಾರಣಿ, ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು
ನವದೆಹಲಿ, ಮಾರ್ಚ್ 29: ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಗುರುವಾರ ಸಂಜೆ ಆಸ್ಪತ್ರೆಗೆ ದಾಖಲಾದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಮೌದಿಂದ ಐದು ಬಾರಿ ಗೆದ್ದು ಶಾಸಕರಾಗಿದ್ದ ಅವರು 2005 ರಿಂದ ರಾಜ್ಯ ಮತ್ತು ಪಂಜಾಬ್‌ನಲ್ಲಿ ಜೈಲಿನಲ್ಲಿದ್ದರು. ಯುಪಿಯ ಬಂಡಾದಲ್ಲಿರುವ ಜೈಲಿನಲ್ಲಿದ್ದ 63 ವರ್ಷದ ಅನ್ಸಾರಿಯನ್ನು ವಾಂತಿ-ಭೇದಿ ಸಮಸ್ಯೆಯಿಂದಾಗಿ ಗುರುವಾರ ರಾತ್ರಿ 8:25 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅನ್ಸಾರಿಯನ್ನು ಜೈಲು ಅಧಿಕಾರಿಗಳು ಜಿಲ್ಲೆಯ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿ ಸೇರಿಸಿದ್ದರು.
ರೋಗಿಗೆ ಒಂಬತ್ತು ವೈದ್ಯರ ತಂಡವು ತಕ್ಷಣದ ವೈದ್ಯಕೀಯ ಆರೈಕೆ ಒದಗಿಸಿತು. ಆದರೆ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ರೋಗಿಯು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅನ್ಸಾರಿಯನ್ನು ಆಸ್ಪತ್ರೆಗೆ ಕರೆದೊಯ್ದ ಬೆನ್ನಲ್ಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಯ ಹೊರಗೆ ನಿಯೋಜಿಸಲಾಗಿತ್ತು. ಅನ್ಸಾರಿ ಸಾವಿನ ಬಳಿಕ ಉತ್ತರ ಪ್ರದೇಶದಾದ್ಯಂತ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.
ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಅವರು ಬಂದಾ, ಮೌ, ಗಾಜಿಪುರ ಮತ್ತು ವಾರಣಾಸಿ ಜಿಲ್ಲೆಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ ತಂಡಗಳನ್ನು ನಿಯೋಜಿಸಿದ್ದಾರೆ.
ಮಂಗಳವಾರ ಮುಂಜಾನೆ ಅನ್ಸಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು 14 ಗಂಟೆಗಳ ನಂತರ ಡಿಸ್ಚಾರ್ಜ್ ಆಗಿದ್ದರು. ಸಹೋದರನಿಗೆ ಜೈಲಿನಲ್ಲಿ ವಿಷಯುಕ್ತ ಆಹಾರ ನೀಡಲಾಗಿತ್ತು ಎಂದು ಅನ್ಸಾರಿ ಸಹೋದರ ಘಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಆರೋಪಿಸಿದ್ದಾರೆ.
ಮುಖ್ತಾರ್ ಅನ್ಸಾರಿ ವಿರುದ್ಧ 61 ಕ್ರಿಮಿನಲ್ ಪ್ರಕರಣಗಳಿದ್ದು, ಅದರಲ್ಲಿ 15 ಕೊಲೆ ಆರೋಪದ ಕೇಸ್‌ಗಳಿವೆ. 1980 ರ ದಶಕದಲ್ಲಿ ಗ್ಯಾಂಗ್‌ವೊಂದನ್ನು ಸೇರಿದ್ದ. ನಂತರ 1990 ರ ದಶಕದಲ್ಲಿ ತನ್ನದೇ ಆದ ಗುಂಪನ್ನು ರಚಿಸಿದ್ದ. ಮೌ, ಘಾಜಿಪುರ, ವಾರಣಾಸಿ ಮತ್ತು ಜೌನ್‌ಪುರ ಜಿಲ್ಲೆಗಳಲ್ಲಿ ಈ ತಂಡ ಸುಲಿಗೆ ಮತ್ತು ಅಪಹರಣದಲ್ಲಿ ತೊಡಗಿತ್ತು.