LATEST NEWS
ಕೇರಳದಲ್ಲಿ ಅಧರ್ಮ ತಾಂಡವವಾಡುತ್ತಿದೆ – ಯೋಗಿ ಆದಿತ್ಯನಾಥ
ನಾರಾಯಣ ಗುರುಗಳು ನಡೆದಾಡಿದ ಭೂಮಿಯಲ್ಲಿ ಅಧರ್ಮ ತಾಂಡವವಾಡುತ್ತಿದೆ – ಯೋಗಿ ಆದಿತ್ಯನಾಥ
ಮಂಗಳೂರು ಅಕ್ಟೋಬರ್ 5: ಮಂಗಳೂರಿನ ಕದ್ರಿಯ ಯೋಗೇಶ್ವರ ಮಠಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭೇಟಿ ನೀಡಿದರು. ಕೇರಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್ ಎಸ್ ಎಸ್ ಹಾಗು ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆ ವಿರೋಧಿಸಿ ಬಿಜೆಪಿ ಆಯೋಜಿಸಿರುವ ಬೃಹತ್ ಜನರಕ್ಷಾ ಯಾತ್ರೆಯಲ್ಲಿ ಭಾಗವಹಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ ಆಗಮಿಸಿದರು.
ಕೇರಳದಿಂದ ನೇರವಾಗಿ ಮಂಗಳೂರಿನ ಕದ್ರಿಯಲ್ಲಿರುವ ಯೋಗೇಶ್ವರ ಮಠಕ್ಕೆ ಬಂದ
ಯೋಗಿ ಆದಿತ್ಯನಾಥ ರನ್ನು ಕದ್ರಿ ಯೋಗೇಶ್ವರ ಮಠದ ಮಠಾಧೀಶ ನಿರ್ಮಲಾನಂದ ಜಿ ಸ್ವಾಗತಿಸಿದರು. ನಂತರ ಮಠದ ಆವರಣ ದಲ್ಲಿರುವ ಕಾಲಭೈರವೇಶ್ವರ ದೇವಾಲಯದಲ್ಲಿ ಯೋಗಿ ಆದಿತ್ಯನಾಥ್ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಠದಲ್ಲಿ ನೂರಾರು ಮಠದ ಅನುಯಾಯಿಗಳು ಹಾಗು ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ,ನಾಥ ಸಂಪ್ರದಾಯದ ಪ್ರತಿಷ್ಠಿತ ಸ್ಥಳ ಕದ್ರಿಯ ಈ ಯೋಗೇಶ್ವರ ಮಠವಾಗಿದೆ. ಈ ಮಠದಲ್ಲಿ ಪ್ರಾಚೀನ ಪರಂಪರೆ ಇದೆ. ಸನಾತನ ಹಿಂದೂ ಧರ್ಮದ ರಕ್ಷಣೆ ಮಠಗಳಿಂದಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೇರಳ ಸಿಪಿಎಂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ್ ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಕೇರಳ ಶ್ರೀ ನಾರಾಯಣಗುರುಗಳು ನಡೆದಾಡಿದ ಪುಣ್ಯ ಭೂಮಿ. ಆದರೆ ಇದೀಗ ಕೇರಳದಲ್ಲಿ ಅಧರ್ಮ ತಾಂಡವಾಡುತ್ತಿದೆ ಎಂದು ಕಿಡಿಕಾರಿದರು.