DAKSHINA KANNADA
ಮಂಗಳೂರಿಗೆ ಯೋಗಿ ಆದಿತ್ಯನಾಥ; ಪೇಜಾವರ ಶ್ರೀಗಳ ಭೇಟಿ
ಮಂಗಳೂರು, ಫೆಬ್ರವರಿ 22 : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಭಾನುವಾರ ಕಾಸರಗೋಡು ಪ್ರವಾಸಗೈದು ಹಿಂದಿರುಗುವ ಸಂದರ್ಭ ದಾರಿ ಮಧ್ಯೆ ಮಂಗಳೂರು ಕದ್ರಿಯಲ್ಲಿರುವ ಕದಲೀ ಶ್ರೀ ಯೋಗೇಶ್ವರ ಮಠಕ್ಕೆ ಭೇಟಿ ನೀಡಿದರು.
ಮಠದ ಬಾಲಾಯದಲ್ಲಿರುವ ಕಾಲಭೈರವ ಮತ್ತು ಶಿವನ ಪೂಜೆ ನೆರವೇರಿಸಿದ ಯೋಗಿ, ಶ್ರೀ ರಾಜ ಯೋಗಿ ನಿರ್ಮಲನಾಥಜಿ ಮಹಾರಾಜ್ ಜತೆ ಮಾತುಕತೆ ನಡೆಸಿದರು. ಬಳಿಕ ಮಠದ ಗುರು ಸಭಾಗೃಹ ಮತ್ತು ಅನ್ನಛತ್ರವನ್ನು ಉದ್ಘಾಟಿಸಿದರು. ಮಠದಲ್ಲಿ ಮುಂದೆ ನಡೆಯುವ ದೇವಸ್ಥಾನದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವಂತೆ ಯೋಗಿ ಅವರಿಗೆ ಆಮಂತ್ರಣ ನೀಡಲಾಯಿತು.
ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾಗಿರುವ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕುರಿತು ಮಾತುಕತೆ ನಡೆಸಿದರು. ಮಠದಲ್ಲಿ ಚಪಾತಿ, ಅನ್ನ, ಹಣ್ಣು ಹಂಪಲು ಸಹಿತ ಭೋಜನ ಸ್ವೀಕಾರ ಮಾಡಿ, ಬಳಿಕ ಮಂಗಳೂರು ವಿಮಾನ ನಿಲ್ದಾಣ ಮೂಲಕ ಉತ್ತರ ಪ್ರದೇಶಕ್ಕೆ ಯೋಗಿ ಆದಿತ್ಯನಾಥ್ ತೆರಳಿದರು.
ಶಾಸಕ ವೇದವ್ಯಾಸ ಡಿ.ಕಾಮತ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಕಾರ್ಪೊರೇಟರ್‌ಗಳಾದ ಶಕಿಲಾ ಕಾವ ಮತ್ತು ಮನೋಹರ ಶೆಟ್ಟಿ, ಮಠದ ಅಭಿಮಾನಿಗಳಾದ ಅಜಯ್ ಕುಮಾರ್, ವಾಸುದೇವ ಡಿ.ಕಾಮತ್, ಎಚ್.ಕೆ.ಪುರುಷೋತ್ತಮ, ಎಆರ್‌ಟಿಒ ಗಂಗಾಧರ್, ಕಿರಣ್ ಕುಮಾರ್ ಜೋಗಿ ಮತ್ತಿತರರಿದ್ದರು.