LATEST NEWS
ಛತ್ರಪತಿ ಶಿವಾಜಿ ಹೆಸರಲ್ಲಿ ಚಂದಾ ವಸೂಲಿಗೆ ಹೊರಟ ತಂಡಕ್ಕೆ ಸಾರ್ವಜನಿಕರಿಂದ ಧರ್ಮದೇಟು

ಛತ್ರಪತಿ ಶಿವಾಜಿ ಹೆಸರಲ್ಲಿ ಚಂದಾ ವಸೂಲಿಗೆ ಹೊರಟ ತಂಡಕ್ಕೆ ಸಾರ್ವಜನಿಕರಿಂದ ಧರ್ಮದೇಟು
ಉಡುಪಿ ಜೂನ್ 22: ಛತ್ರಪತಿ ಶಿವಾಜಿ ಹೆಸರಿನಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಿಡಿದು ಚಂದಾ ವಸೂಲಿಗೆ ಬಂದಿದ್ದ ತಂಡಕ್ಕೆ ಸಾರ್ವಜನಿಕರು ಅರಬೆತ್ತಲೆ ಮಾಡಿ ಧರ್ಮದೇಟು ನೀಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಂಕರಪುರದಲ್ಲಿ ಈ ಘಟನೆ ನಡೆದಿದೆ. ಮೂರು ಯುವಕರ ತಂಡ ಮಂಗಳೂರಿಂದ ಉಡುಪಿಗೆ ಬಂದು ಛತ್ರಪತಿ ಶಿವಾಜಿ ಸೇವಾ ಬಳಗ ಕಾವೂರಿನ ಮೊದಲ ವರ್ಷದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಕೊಟ್ಟು ಧನ ಸಂಗ್ರಹ ಮಾಡಿದ್ದಾರೆ.
ನಂತರ ಶಂಕರಪುರದಲ್ಲಿ ಮಧ್ಯಪಾನ ಮಾಡಿ ಈ ಯುವಕರ ಗುಂಪಿನಲ್ಲೇ ಚಂದಾ ಹಣದ ವಿಚಾರವಾಗಿ ಗಲಾಟೆಯಾಗಿದೆ. ಆ ಸಂದರ್ಭ ಸ್ಥಳೀಯರು ಗಲಾಟೆ ಬಗ್ಗೆ ವಿಚಾರಿಸಿದಾಗ ಚಂದಾ ವಸೂಲಿ ಹಣದ ಅವ್ಯವಹಾರ ಗೊತ್ತಾಗಿದೆ.

ಮಧ್ಯಪಾನ ಮಾಡಿ ಚಂದಾ ವಸೂಲಿಗೆ ಬಗ್ಗೆ ಸ್ಥಳೀಯರು ಪ್ರಶ್ನಿಸಿದ್ದಕ್ಕೆ ಅನುಚಿತವಾಗಿಯೂ ವರ್ತನೆ ತೋರಿರುವುದರಿಂದ ಸ್ಥಳೀಯ ಯುವಕರು ಎಲ್ಲರ ಅಂಗಿ ಬಿಚ್ಚಿ ಅರೆಬೆತ್ತಲೆ ಮಾಡಿ ಧರ್ಮದೇಟು ನೀಡಿದ್ದು, ಓಡಿ ಹೋಗದಂತೆ ನೋಡಿಕೊಂಡು ಶಿರ್ವ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಗಳೂರಿನ ಕಾವೂರಿನಲ್ಲಿ ಶಿವಾಜಿ ಸೇವಾ ಬಳಗದ ಕಾರ್ಯಕ್ರಮ ನಿಗದಿಯಾಗಿದ್ದು ಸತ್ಯ. ಆದ್ರೆ ಈ ತಂಡಕ್ಕೂ ಕಾವೂರಿನ ಸಮಿತಿಗೂ ಸಂಬಂಧವಿಲ್ಲ. ನೂರಾರು ಆಮಂತ್ರಣ ಪತ್ರಿಕೆ ತಂದು ಚಂದಾ ವಸೂಲಿ ಮಾಡಿ ಹಣ ಮಾಡುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.