LATEST NEWS
ಗಾಂಜಾ ಇನ್ನು ಮುಂದೆ ಅಪಾಯಕಾರಿ ಮಾದಕ ವಸ್ತುವಲ್ಲ – ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ

ನವದೆಹಲಿ: ಸದ್ಯ ದೇಶದಲ್ಲಿ ಭಾರೀ ಸುದ್ದಿಯಲ್ಲಿರುವ ಗಾಂಜಾ ಮಾದಕ ವಸ್ತುವಿಗೆ ಸಂಬಂಧಪಟ್ಟಂತೆ ಶುಭ ಸುದ್ದಿ ಬಂದಿದ್ದುಸ ಗಾಂಜಾ ಹಾಗೂ ಗಾಂಜಾ ಅಂಟನ್ನು ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಹೊರಗಿಡುವ ಸಂಬಂಧ ವಿಶ್ವಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ ಅದಕ್ಕೆ ಭಾರತ ಬೆಂಬಲವನ್ನು ವ್ಯಕ್ತಪಡಿಸಿದೆ. ಡಿಸೆಂಬರ್ 2 ರಿಂದ 4 ರವರೆಗೆ ನಡೆದ ಮಾದಕ ದ್ರವ್ಯ ವಸ್ತುಗಳಿಗೆ ಸಂಬಂಧಿಸಿದ ಆಯೋಗದ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಮಾದಕ ವಸ್ತುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಆಯೋಗದ 1961ರ ಒಪ್ಪಂದದ 4ನೇ ಅನುಚ್ಛೇದದಡಿ ಹೆರಾಯಿನ್‌ನಂತಹ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿ ಗಾಂಜಾ ಇತ್ತು. ಈ ಪಟ್ಟಿಯಿಂದ ಗಾಂಜಾವನ್ನು ಹೊರಗಿಡಲು 53 ಸದಸ್ಯ ರಾಷ್ಟ್ರಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು. ಈ ಅಧಿವೇಶನದಲ್ಲಿ ಭಾರತ ಸೇರಿದಂತೆ 27 ದೇಶಗಳು ಪರವಾಗಿ ಮತ ಹಾಕಿದ್ದರಿಂದ ನಿರ್ಣಯ ಅಂಗೀಕಾರವಾಗಿದೆ.

ಭಾರತ, ಅಮೆರಿಕ, ಯುರೋಪ್ ಒಕ್ಕೂಟದ ಬಹುತೇಕ ದೇಶಗಳು ಸೇರಿ 27 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾವಣೆ ಮಾಡಿದ್ದರೆ ಚೀನಾ, ಪಾಕಿಸ್ತಾನ, ರಷ್ಯಾ ಸೇರಿ 25 ದೇಶಗಳು ವಿರುದ್ಧ ಹಾಕಿದವು. ಉಕ್ರೇನ್ ತಟಸ್ಥವಾಗಿ ನಿಂತಿತು.
ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿದ್ದ ಕಾರಣ ಗಾಂಜಾವನ್ನು ಔಷಧಿ ಹಾಗೂ ಚಿಕಿತ್ಸೆಗೆ ಬಳಸಲು ಸಾಧ್ಯವಾಗಿರಲಿಲ್ಲ. ವಿಶ್ವಸಂಸ್ಥೆ ಈ ಪಟ್ಟಿಯಿಂದ ಗಾಂಜಾವನ್ನು ಹೊರಗಡೆ ಇಟ್ಟ ಕಾರಣ ಇನ್ನು ಮುಂದೆ ಬಳಸಬಹುದಾಗಿದೆ.
ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಗಾಂಜಾ ಸೇವೆನೆ ಅಪರಾಧವಾಗಿರುವುದರಿಂದ ಈ ನಿರ್ಣಯದಿಂದಾಗಿ ಭಾರತದಲ್ಲಿ ಕಾಯ್ದೆಯ ತಿದ್ದುಪಡಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಭಾರತದಲ್ಲಿ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಗಾಂಜಾವನ್ನ ಹೊರಗಡೆ ಇಡಬೇಕಾದರೆ ಡ್ರಗ್ ಮತ್ತು ಕಾಸ್ಮೆಟಿಕ್ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಯಾವ ನಿರ್ಧಾರವನ್ನು ಪ್ರಕಟಿಸುತ್ತದೆ ಎಂಬ ಕುತೂಹಲ ಮೂಡಿದೆ.