LATEST NEWS
ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಕೇಂದ್ರ ಸಚಿವೆ ಉಮಾಭಾರತಿ

ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಕೇಂದ್ರ ಸಚಿವೆ ಉಮಾಭಾರತಿ
ಉಡುಪಿ ಜನವರಿ 24: ಪೇಜಾವರ ವಿಶ್ವೇಶ ತೀರ್ಥ ಸ್ವಾಮಿಜಿ ಅವರನ್ನು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಸಚಿವೆ ಉಮಾಭಾರತಿ ಇಂದು ಪೇಜಾವರ ಮಠದಲ್ಲಿ ಭೇಟಿ ಮಾಡಿದರು.
ಇತ್ತೀಚೆಗೆ ಮಂತ್ರಾಲಯದಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಇನ್ನೋವಾ ಕಾರಲ್ಲಿ ಪೇಜಾವರಶ್ರೀ ಅವರು ಸಂಚಾರ ಮಾಡುತ್ತಿರುವ ಸಂದರ್ಭದಲ್ಲಿ ಉಂಟಾದ ಸಣ್ಣ ಅಪಘಾತದಲ್ಲಿ ಬೆನ್ನು ನೋವು ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಲು ಕೇಂದ್ರ ಸಚಿವೆ ಉಮಾಭಾರತಿ ಅವರು ಇಂದು ಉಡುಪಿಗೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಉಮಾಭಾರತಿ ಸ್ವಾಮೀಜಿಗೆ ಅಪಘಾತವಾದ ಸುದ್ದಿ ಕೇಳಿ ಆಘಾತವಾಯ್ತು ಈ ಹಿನ್ನಲೆಯಲ್ಲಿ ಪೇಜಾವರಶ್ರೀಯವರನ್ನು ಭೇಟಿ ಮಾಡಿದ್ದೇನೆ ಎಂದರು. ಸ್ವಾಮಿಜಿಯವರ ಬೆನ್ನಿಗೆ ಹೊಡೆತ ಬಿದ್ದಿದ್ದರಿಂದ ವಿಶ್ರಾಂತಿ ಅವಶ್ಯಕತೆ ಇದ್ದು, 20 ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿಸಿದರು. ಈಗ ಸ್ವಾಮಿಜಿಯವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪೇಜಾವರಶ್ರೀ ಪಂಚಮ ಪರ್ಯಾಯ ಮುಗಿಸಿದ್ದಾರೆ, ಪಂಚಮ ಪರ್ಯಾಯ ಐತಿಹಾಸಿಕವಾದದ್ದು ಈ ಹಿನ್ನಲೆಯಲ್ಲಿ ಉಡುಪಿಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸಲಾಗುವುದು ಎಂದು ಕೇಂದ್ರ ಸಚಿವೆ ಉಮಾಭಾರತಿ ತಿಳಿಸಿದರು. ಸ್ವಾಮೀಜಿ ಗುಣಮುಖರಾದ ನಂತರ ಈ ಸಂಭ್ರಮಾಚರಣೆ ಮಾಡಲಾಗುವುದು ಇದು ಉಡುಪಿಯಲ್ಲೇ ದೊಡ್ಡ ಸಂಭ್ರಮಾಚರಣೆಯಾಗಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಪಡಿಸಿಲ್ಲ, ಈ ಕಾರ್ಯಕ್ರಮ ರಾಜಕೀಯೇತರವಾಗಿ ಇರುತ್ತದೆ ಎಂದು ಹೇಳಿದರು.