LATEST NEWS
ಉಳ್ಳಾಲ ನಗರಸಭೆ – ಜೆಡಿಎಸ್ ನತ್ತ ಮುಖ ಮಾಡಿದ ಕಾಂಗ್ರೇಸ್
ಉಳ್ಳಾಲ ನಗರಸಭೆ – ಜೆಡಿಎಸ್ ನತ್ತ ಮುಖ ಮಾಡಿದ ಕಾಂಗ್ರೇಸ್
ಮಂಗಳೂರು ಸೆಪ್ಟೆಂಬರ್ 04: ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊರ ಬಿದ್ದಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಳ್ಳಾಲ ನಗರಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ದಾಖಲಿಸುವಲ್ಲಿ ವಿಫಲವಾಗಿದ್ದು, ವಸತಿ ಸಚಿವ ಯು.ಟಿ ಖಾದರ್ ತಮ್ಮ ಸ್ವಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಈ ಬಾರಿಯ ಉಳ್ಳಾಲ ನಗರ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಎಸ್ ಡಿ ಪಿ ಐ ಹಾಗು ಜೆಡಿಎಸ್ ಭಾರೀ ಹೊಡೆತ ನೀಡಿದೆ. ಉಳ್ಳಾಲ ಪುರಸಭೆ ಇದ್ದಾಗ 27 ವಾರ್ಡಗಳಿದ್ದವು ಅದರಲ್ಲಿ ಕಾಂಗ್ರೆಸ್ 17, ಬಿಜೆಪಿ 7, ಎಸ್ ಡಿ ಪಿ ಐ 1,ಸಿಪಿಐಎಂ 1 ಸ್ಥಾನಗಳನ್ನು ಗೆದ್ದು ಕೊಂಡಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಪ್ರಾಬಲ್ಯವನ್ನು ಎಸ್ ಡಿ ಪಿ ಐ ಹಾಗು ಜೆಡಿಎಸ್ ಮುರಿದಿದೆ. ಕಳೆದ ಬಾರಿ 7 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈ ಬಾರಿ ಈ ಸ್ಥಾನ ಕಳೆದು ಕೊಂಡಿದೆ. ಜೆಡಿಎಸ್ ಇದೇ ಮೊದಲ ಬಾರಿಗೆ ಖಾತೆ ತೆರೆದಿದ್ದು 4 ಸ್ಥಾನಗಳನ್ನು ಬಾಚಿಕೊಂಡಿದೆ.
ಈ ಹಿನ್ನಲೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ರಾಜ್ಯದ ಮೈತ್ರಿ ಸರಕಾರ ದಂತೆ ಇಲ್ಲಿಯೂ ಕಾಂಗ್ರೆಸ್ ಜೆಡಿಎಸ್ ಸದಸ್ಯರನ್ನು ಸೆಳೆಯುವತ್ತ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.
ಉಳ್ಳಾಲದ ನಗರ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಯಾಗಿರುವುದರಲ್ಲಿ ಪಕ್ಷದ ಕೆಲವು ನ್ಯೂನತೆ ಕಾರಣ ಇರಬಹುದು ಎಂದು ಸಚಿವ ಯು.ಟಿ ಖಾದರ್ ಆಭಿಪ್ರಾಯ ಪಟ್ಟಿದ್ದಾರೆ.
ಪಕ್ಷದ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಉಳ್ಳಾಲದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನ ಲಭ್ಯವಾಗಿಲ್ಲ. ಹಾಗಂತ ಪಕ್ಷಕ್ಕೆ ಅಧಿಕಾರ ಇಲ್ಲದಿದ್ದರೂ, ಚಿಂತೆ ಇಲ್ಲ. ಪಕ್ಷದ ಸಿದ್ಧಾಂತ ಒಪ್ಪಿಕೊಳ್ಳದವರ ಜೊತೆ ಸೇರಿ ಅಧಿಕಾರ ನಡೆಸಲ್ಲ ಎಂದು ಹೇಳಿದರು.
ಉಳ್ಳಾಲ ನಗರ ಸಭೆ ಗೆ ಸಂಬಂಧಿಸಿದಂತೆ ಎಸ್ ಡಿ ಪಿ ಐ ಜೊತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ ಅವರು ಉಳ್ಳಾಲದಲ್ಲಿ ಜೆ ಡಿ ಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡಿದ್ದಾರೆ.