ಉಡುಪಿ ಮೇ 12 : ನಿನ್ನೆ ಸಂಜೆಯ ನಂತರ ಸುರಿದ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ರಿಕ್ಷಾ ಮೇಲೆ ಬೃಹತ್ ಗಾತ್ರದ ಮರ ಬಿದ್ದು ರಿಕ್ಷಾದಲ್ಲಿದ್ದ ಪ್ರಯಾಣಿಕರಿಬ್ಬರು ಸಾವನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪು – ಶಿರ್ವ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ಮಲ್ಲಾರು ಚಂದ್ರನಗರದ ಬಳಿ ಗುರುವಾರ ರಾತ್ರಿ ವೇಳೆ ಈ ಅವಘಡ ಸಂಭವಿಸಿದೆ.

ಪಾದೂರು ಕೂರಾಲು ರೈಸ್ ಮಿಲ್ ಬಳಿಯ ನಿವಾಸಿ 45 ವರ್ಷದ ಪುಷ್ಪಾ ಕುಲಾಲ್ ಮತ್ತು ಕಳತ್ತೂರು ನಿವಾಸಿ 48ವರ್ಷದ ಕೃಷ್ಣ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ರಿಕ್ಷಾ ಚಾಲಕ ಶರೀಫ್ ಅವರು ಪವಾಡ ಸದೃಶ ರೀತಿಯಲ್ಲಿ ರಿಕ್ಷಾದಿಂದ ಜಿಗಿದು ಅಪಾಯದಿಂದ ಪಾರಾಗಿದ್ದಾರೆ.

ಕಾಪುವಿನಿಂದ ಪಾದೂರಿಗೆ ತೆರಳುತಿದ್ದ ರಿಕ್ಷಾದ ಮೇಲೆ ಧೂಪದ ಮರ ಉರುಳಿ ಬಿದ್ದಿದ್ದು ಇಬ್ಬರು ಪ್ರಯಾಣಿಕರು ರಿಕ್ಷಾದೊಳಗೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ಮರವನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ಪೊಲೀಸ್, ಮೆಸ್ಕಾಂ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಸಹಿತ ನೂರಾರು ಮಂದಿ ಸಹಕಾರ ಹಾಗು ಜೆಸಿಬಿ, ಕ್ರೇನ್ ಸಹಾಯದಿಂದ ಸತತ ಒಂದೂವರೆ ಗಂಟೆಗಳ ಪರಿಶ್ರಮದ ಬಳಿಕ ಮರವನ್ನು ಬದಿಗೆ ಸರಿಸಲಾಯಿತು.
ರಿಕ್ಷಾದೊಳಗೆ ಸಿಲುಕಿದ್ದವರು ಅಷ್ಟರಲ್ಲೇ ಮೃತ ಪಟ್ಟಿದ್ದರು. ಮೃತದೇಹಗಳನ್ನು ಆಂಬ್ಯುಲೆನ್ಸ್ ಮೂಲಕ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತು.