Connect with us

LATEST NEWS

ಉಡುಪಿ ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ ಮಳೆ ಕೊಯ್ಲು ಕಡ್ಡಾಯ

ಉಡುಪಿ ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ ಮಳೆ ಕೊಯ್ಲು ಕಡ್ಡಾಯ

ಉಡುಪಿ, ಜುಲೈ 10: ಜಿಲ್ಲೆಯ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಸಂದರ್ಭದಲ್ಲಿ ಮಳೆ ನೀರು ಮರು ಪೂರಣ ಯೋಜನೆ ಕಡ್ಡಾಯ ಗೊಳಿಸಲಾಗಿದೆ. ಇಲ್ಲದಿದ್ದರೆ, ಮನೆ ನಿರ್ಮಾಣ ನಂತರ ಕಂಪ್ಲೀಷನ್ ಸರ್ಟಿಫಿಕೇಟ್(ಸಿಸಿ) ಸಿಗುವುದಿಲ್ಲ.

ಭಾರತ ಸರ್ಕಾರವು ಜಲಭದ್ರತೆಗಾಗಿ “ಜಲ ಶಕ್ತಿ ಅಭಿಯಾನ” ಎಂಬ ಕಾರ್ಯಕ್ರಮವನ್ನು ರಾಜ್ಯ ಸರಕಾರಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಬುಧವಾರ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

ಈಗಾಗಲೇ ಪ್ರಗತಿಯಲ್ಲಿರುವ ಮನೆಗಳು, ಕಾಮಗಾರಿ ಪೂರ್ಣಗೊಳ್ಳುವ ಮೊದಲು ಮಳೆ ನೀರು ಕೊಯ್ಲು ಯೋಜನೆಯನ್ನು ಕೈಗೊಳ್ಳಬೇಕು. ಹೊಸದಾಗಿ ನಿರ್ಮಾಣ ಗೊಳ್ಳಲಿರುವ ಮನೆಗಳ ಮೂಲ ಪ್ಲಾನ್‍ನಲ್ಲಿಯೇ ಮಳೆ ಕೊಯ್ಲು ಯೋಜನೆ ಇರಬೇಕು. ಇಲ್ಲದಿದ್ದರೆ ಅಂತಹ ಮನೆ ನಿರ್ಮಾಣಕ್ಕೆ ಲೈಸೆನ್ಸ್ ನೀಡದಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್‍ಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ತೆರೆದ ಬಾವಿ, ಬೋರ್‍ವೆಲ್ ಅಥವಾ ಪ್ರತ್ಯೇಕ ಇಂಗು ಗುಂಡಿ ಕೊರೆದು ಮಳೆ ನೀರು ಶೇಖರಣೆಗೆ ಯೋಜನೆ ಹಾಕಿಕೊಳ್ಳಬೇಕು. ಇತ್ತೀಚಿನ ಬೇಸಿಗೆಯಲ್ಲಿ ಜಿಲ್ಲೆಯ ಹಲವೆಡೆ ಪ್ರದೇಶಗಳಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಮಳೆ ಕೊಯ್ಲು ಕಡ್ಡಾಯಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ ಹಾಗೂ ಪೂರ್ಣಗೊಂಡ ಮನೆಗಳ ಸಂಖ್ಯೆ ಹಾಗೂ ಅವುಗಳಲ್ಲಿ ಮಳೆ ಕೊಯ್ಲು ಅಳವಡಿಸಿರುವ ಬಗ್ಗೆ ನಿಗಾ ವಹಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಗ್ರ ಮಾಹಿತಿ ಇಟ್ಟುಕೊಳ್ಳಲಾಗುವುದು. ಈ ಮಾಹಿತಿ ಗಳನ್ನು ಸಾರ್ವಜನಿಕವಾಗಿಯೇ ಪ್ರಕಟಿಸಲಾಗುವುದು. ಜಿಲ್ಲೆಯಲ್ಲಿ ಸಾಂಪ್ರದಾಯಿಕ ನೀರಿನ ಮೂಲಗಳನ್ನು ಸಂರಕ್ಷಿಸಿ, ಅವುಗಳಲ್ಲಿ ನೀರಿನ ಸಂಗ್ರಹ ಹೆಚ್ಚಿಸಲು ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕಾರ್ಯೋನ್ಮುಖರಾಗುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಪ್ರಮುಖ ಕೆರೆ, ಮರಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿ ಗೊಳಿಸಲು ಅವರು ತಿಳಿಸಿದರು. ಉಡುಪಿ ನಗರ ಸಭೆ ವ್ಯಾಪ್ತಿಯ 5 ವಾರ್ಡ್‍ಗಳನ್ನು ಆಯ್ಕೆ ಮಾಡಿ ಅಲ್ಲಿನ ಪ್ರತೀ ಮನೆಗೆ 5 ಗಿಡಗಳನ್ನು ನೀಡಿ ಬೆಳೆಸಲು ಪ್ರೋತ್ಸಾಯಿಸಬೇಕು. ಇದಕ್ಕಾಗಿ ಪ್ರತೀ ವಾರ್ಡ್‍ಗೆ ನಗರ ಸಭೆಯ ಒಬ್ಬರು ಇಂಜಿನಿಯರ್‍ನ್ನು ನೋಡಲ್ ಆಗಿ ನೇಮಕ ಮಾಡಬೇಕು. ಜುಲೈ ಅಂತ್ಯದೊಳಗೆ 20 ಸಾವಿರ ಗಿಡಗಳನ್ನು ಈ 5 ವಾರ್ಡ್‍ಗಳಲ್ಲಿ ನೆಟ್ಟು ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರವು ಖಾಸಗೀ ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡುವ ಮುನ್ನ ಚರಂಡಿ ಹಾಗೂ ಮಳೆನೀರು ಕೊಯ್ಲು ಅಳವಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *