ಮಂಗಳೂರಿನಲ್ಲಿ ಕುಡಿಯುವ ನೀರಿನ ಬವಣೆ, ಜನಪ್ರತಿನಿಧಿಗಳಿದ್ದಾರೆ ವಿಧಾನಸೌಧದಲ್ಲಿ ಜಾಗರಣೆ, ಉಸ್ತುವಾರಿ ಸಚಿವ, ಶಾಸಕರಿಗಿಲ್ಲವೇ ಜನರ ಹೊಣೆ?

ಮಂಗಳೂರು ಜುಲೈ 11: ಕಳೆದ ನಾಲ್ಕು ದಿನಗಳಿಂದ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿದೆ. ಬೇಸಿಗೆ ಕಾಲದಲ್ಲಿ ತುಂಬೆಯಲ್ಲಿ ನೀರಿನ ಅಭಾವ ಇಟ್ಟುಕೊಂಡು ಕುಡಿಯುವ ನೀರಿನ ರೇಶನಿಂಗ್ ಮಾಡಿದ್ದ ಜಿಲ್ಲಾಡಳಿತ ಈಗ ಪೈಪ್ ದುರಸ್ಥಿಯಿಂದ ಕುಡಿಯುವ ನೀರು ಸಂಪೂರ್ಣ ಬಂದ್ ಮಾಡಿ ಮಂಗಳೂರು ನಗರದ ಜನರು ಮಳೆ ನೀರನ್ನು ಕುಡಿಯುವ ಸ್ಥಿತಿಗೆ ತಂದು ನಿಲ್ಲಿಸಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಜಿಲ್ಲೆಯ ಜನಪ್ರತಿನಿಧಿಗಳು ಬೆಂಗಳೂರಿನಲ್ಲಿ ಸರಕಾರ ಉಳಿಸುವ ಉರುಳಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಮಂಗಳೂರು ನಗರಕ್ಕೆ ನೀರು ಪೂರೈಸುವ ಪ್ರಮುಖ ಪೈಪ್ ಲೈನ್ ನಲ್ಲಿ ಕಣ್ಣೂರು ಸಮೀಪ ಬಿರುಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ನಗರಕ್ಕೆ ಕಳೆದ ಭಾನುವಾರದಿಂದ ನೀರು ಸರಬರಾಜನ್ನು ನಿಲ್ಲಿಸಲಾಗಿದೆ. ಈಗಾಗಲೇ ಪೈಪ್ ಲೈನ್ ದುರಸ್ಥಿ ಕಾರ್ಯ ಪ್ರಾರಂಭ ಮಾಡಿ ನಾಲ್ಕು ದಿನ ಕಳೆದರೂ ಕೂಡ ಇನ್ನು ನೀರಿನ ಪೈಪ್ ಲೈನ್ ದುರಸ್ಥಿ ಕಾರ್ಯ ಮುಗಿದಿಲ್ಲ.

ಈ ನಡುವೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಪೈಪ್ ಲೈನ್ ದುರಸ್ಥಿ ಕಾರ್ಯಕ್ಕೆ ತೊಂದರೆಯಾಗಿದೆ ಎಂದು ಮಹಾನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಬೇಸಿಗೆ ಕಾಲದಲ್ಲಿ ನೀರಿನ ರೇಷನಿಂಗ್ ನಿಂದ ಕುಡಿಯುವ ನೀರು ಸರಿಯಾಗಿ ಸಿಗದೆ ತೊಂದರೆ ಅನುಭವಿಸಿದ್ದ ಮಂಗಳೂರಿಗರು, ಈಗ ನೀರಿನ ಪೈಪ್ ಲೈನ್ ಸಮಸ್ಯೆಯಿಂದಾಗಿ ಮತ್ತೆ ತೊಂದರೆ ಅನುಭವಿಸುವಂತಾಗಿದೆ.

ಈಗಾಗಲೇ ನೀರಿಲ್ಲದೆ ನಾಲ್ಕು ದಿನ ಕಳೆದ ಹಿನ್ನಲೆ ಜನರು ಹೊರಗೆ ಬರುವ ಮಳೆ ನೀರನ್ನೆ ಹಿಡಿದು ಕುಡಿಯಬೇಕಾದ ಪರಿಸ್ಥಿತಿ ಬಂದಿದೆ. ಇತರ ಕೆಲಸಗಳಿಗೆ ಮಳೆ ನೀರು ಬಳಸಬಹುದಾದರೂ ಕುಡಿಯಲು ಮತ್ತು ಅಡುಗೆ ಮಾಡಲು ಮಳೆ ನೀರಿನ ಬಳಕೆ ಅಪಾಯವಾಗಿದ್ದು ಆದರೂ ಅದನ್ನೆ ಬಳಸಬೇಕಾದ ಅನಿವಾರ್ಯತೆ ಬಂದೊದಗಿದೆ. ಕುಡಿಯುವ ನೀರಿನ ಅಭಾವದಿಂದಾಗಿ ಖಾಸಗಿ ಹೊಟೇಲ್, ವಸತಿ ಸಮುಚ್ಚಯಗಳು , ಮನೆಯವರು ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ.

ನಗರದಲ್ಲಿ ನಾಲ್ಕು ದಿನಗಳಿಂದ ಕುಡಿಯುವ ನೀರು ಸರಬರಾಜು ಬಂದ್ ಆಗಿದ್ದರೂ ಕೂಡ ಸ್ಥಳೀಯರು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಲೆ ಕೆಡಿಸಿಕೊಂಡಿಲ್ಲ. ಸಾರ್ವಜನಿಕರು ಮಳೆ ನೀರನ್ನು ಕುಡಿಯುವ ಪರಿಸ್ಥಿತಿ ಬಂದರು ಜಿಲ್ಲೆಯ ಜನಪ್ರತಿನಿಧಿಗಳು ಬೆಂಗಳೂರಿನಲ್ಲಿ ಮೊಕ್ಕಾ ಹೂಡಿದ್ದು, ಸರಕಾರದ ಡ್ರಾಮಾ ನೋಡುತ್ತ ಕುಳಿತಿದ್ದಾರೆ.

ನಗರದಲ್ಲಿ ಕುಡಿಯುವ ನೀರಿನ ಭಾರಿ ಸಮಸ್ಯೆ ಇದ್ದರೂ ಶಾಸಕರು , ಉಸ್ತುವಾರಿ ಸಚಿವರು ಇತ್ತ ತಲೆ ಹಾಕದೇ ಇರುವುದಕ್ಕೆ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೋಟ್ ಹಾಕಿ ಗೆಲ್ಲಿಸಿದ ನಾಯಕರು ಜನರು ಸಮಸ್ಯೆ ಸರಿಮಾಡುವುದು ಬಿಟ್ಟು, ಸರಕಾರದ ನಾಟಕಗಳನ್ನು ನೋಡುತ್ತಾ ಕುಳಿತಿರುವುದು ವಿಪರ್ಯಾಸವೇ ಸರಿ.