KARNATAKA
ಉಡುಪಿ : ಕುಂದಾಪುರ ಕೋಡಿ ಸಮುದ್ರ ಕಿನಾರೆಯಲ್ಲಿ ರಾಶಿ ರಾಶಿ ತ್ಯಾಜ್ಯದಿಂದ ಸಮುದ್ರ ಜೀವಿಗಳಿಗೆ ಬಂದಿದೆ ಕುತ್ತು..!
ಉಡುಪಿ: ಕುಂದಾಪುರ ಕಡಲ ಕಿನಾರೆ ಪ್ಲಾಸ್ಟಿಕ್ ತ್ಯಾಜ್ಯ, ಚಪ್ಪಲಿ ಪಾದರಕ್ಷೆಗಳ ತ್ಯಾಜ್ಯದಿಂದ ತುಂಬಿದ್ದು ಪ್ರತೀ ವಾರ ಕೋಡಿ ಕಿನಾರೆಯ ಪರಿಸರ ಸ್ವಚ್ಛಗೊಳಿಸುವ ‘ಕ್ಲೀನ್ ಕುಂದಾಪುರ ಯೋಜನೆ’ಯ ಸ್ವಯಂ ಸೇವಕರು, ಕೇವಲ ಬೀಚ್‌ನ 200-300 ಮೀ. ವಿಸ್ತಾರದ ಸುತ್ತಮುತ್ತಲಿನಲ್ಲಿ ನಡೆಸಿದ ಸ್ವಚ್ಛತಾ ಕಾರ್ಯದಲ್ಲಿ ಕನಿಷ್ಠ 1 ಟನ್ ಪಾದರಕ್ಷೆ, ವೈದ್ಯಕೀಯ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿದ್ದಾರೆ.
ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಬೀಳುತ್ತಿರುವ ಮಹಾ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ನದಿ, ಹಳ್ಳ ಹಾಗೂ ತೋಡುಗಳ ಸಂಗ್ರಹಿತ ತ್ಯಾಜ್ಯ ನೀರಿನೊಂದಿಗೆ ಹರಿದು ಸಮುದ್ರ ಸೇರುತ್ತಿದೆ. ಬಹುತೇಕ ಅಣೆಕಟ್ಟುಗಳು ಭರ್ತಿಯಾಗಿರುವುದರಿಂದ ಅಲ್ಲಿಂದ ಹೊರಬರುವ ನೀರು ಸಹ ಸಮುದ್ರ ಸೇರುತ್ತಿದೆ. ನೀರಿನೊಂದಿಗೆ ಸಮುದ್ರ ಸೇರುವ ಈ ತ್ಯಾಜ್ಯಗಳನ್ನು ಅಲೆಗಳು ಮತ್ತೆ ತೀರ ಪ್ರದೇಶಕ್ಕೆ ತರುವುದರಿಂದ ಸಮುದ್ರ ಕಿನಾರೆಯ ಪರಿಸರದಲ್ಲಿ ಪಾದರಕ್ಷೆಗಳು, ಪ್ಲಾಸ್ಟಿಕ್, ವೈದ್ಯಕೀಯ ತ್ಯಾಜ್ಯಗಳು ಎಲ್ಲೆಂದರಲ್ಲಿ ರಾಶಿ ಬಿದ್ದಿವೆ.ನಿರಂತರವಾಗಿ ತ್ಯಾಜ್ಯ ಸಂಗ್ರಹಣೆಯ ಮೂಲಕ ಕಿನಾರೆಯ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಿರುವ ಕ್ಷೀನ್ ಕುಂದಾಪುರದ ಕಾರ್ಯಕರ್ತರು ಪಂಚ ಗಂಗಾವಳಿ ನದಿಗೆ ಹೊಂದಿಕೊಂಡಿರುವ ಕಡಲ ತೀರದಲ್ಲಿ ತ್ಯಾಜ್ಯದ ಹಠಾತ್ ಏರಿಕೆಯನ್ನು ಗಮನಿಸಿದ್ದಾರೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಹರಿಯುವ ವರಾಹಿ, ಸೌಪರ್ಣಿಕಾ, ಖೇಟಾ, ಕುಬ್ಜಾ ಚಕ್ರಾ ನದಿಗಳ ನೀರು, ಪಂಚ ಗಂಗಾವಳಿಯಲ್ಲಿ ಸಂಗಮವಾಗಿ ಅರಬ್ಬಿಯ ಕಡಲು ಸೇರುವುದರಿಂದ ಸಹಜವಾಗಿ ಎರಡು ತಾಲೂಕಿನ ನದಿ ತೀರ ಪ್ರದೇಶಗಳಿಗೆ ಬಂದು ಬೀಳುವ ತ್ಯಾಜ್ಯಗಳು ಒಟ್ಟಾಗಿ ಪಂಚ ಗಂಗಾವಳಿಯಲ್ಲಿ ಸೇರಿ ಅರಬ್ಬಿ ಕಡಲು ಪ್ರವೇಶಿಸುತ್ತದೆ. ಸಮುದ್ರ ಕಿನಾರೆಗಳನ್ನು ಮಳೆಗಾಲದ ಸಮಯದಲ್ಲಿ ಸ್ವಚ್ಛಗೊಳಿಸುವುದು ಅತ್ಯಂತ ಗಮನಾರ್ಹ. ಮಳೆಗಾಲದ ಸಂದರ್ಭದಲ್ಲಿ ಒಟ್ಟಾಗುವ ತ್ಯಾಜ್ಯಗಳ ವಿಲೇವಾರಿ ಆಗದೇ ಇದ್ದಲ್ಲಿ, ಹಳೆಯ ತ್ಯಾಜ್ಯದ ಮೇಲೆ ಕೂತು, ಪದರಗಳಾಗಿ ಅವು ಕಿನಾರೆಯ ಮರಳಲ್ಲಿ ಹೂತು ಹೋಗುತ್ತವೆ. ಇದರಿಂದ ಸಮುದ್ರದ ಮತ್ಸ್ಯ ಸಂತತಿ, ಜಲಚರಗಳು, ಕಡಲಾಮೆ, ವಲಸೆ ಹಕ್ಕಿಗಳು ಹಾಗೂ ಇತರ ಜೀವಿಗಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ.: ಬಹುತೇಕ ತ್ಯಾಜ್ಯಗಳು ಮರು ಬಳಕೆ ಮಾಡಲಾಗದ ಹಾಗೂ ಮಾರುಕಟ್ಟೆಯಲ್ಲಿ ಕನಿಷ್ಠ ಮೌಲ್ಯವನ್ನು ಹೊಂದದೇ ಇರುವ ತ್ಯಾಜ್ಯವಾಗಿರುವುದರಿಂದ ಒಟ್ಟಾದ ತ್ಯಾಜ್ಯಗಳ ವಿಲೇವಾರಿ ಮಾಡುವುದು ಸ್ವಯಂ ಸೇವಕರಿಗೆ ಸವಾಲಿನ ಕೆಲಸವಾಗಿದೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿ ಮತ್ತು ಸಮುದ್ರ ಜೀವಿಗಳ ಉಳಿವಿಗೆ ಈ ಬಗ್ಗೆ ಪ್ರತಿಯೊಬ್ಬರು ಗಂಭೀರ ಯೋಚನೆ ಮಾಡಬೇಕಾದ ಅನಿವಾರ್ಯತೆ ಇದೆ.
You must be logged in to post a comment Login