LATEST NEWS
ಇನ್ನು ಉಡುಪಿ ಕೆಎಂಸಿ ಆಸ್ಪತ್ರೆಯಲ್ಲೂ ಕೊರೊನಾ ಟೆಸ್ಟಿಂಗ್
ಇನ್ನು ಉಡುಪಿ ಕೆಎಂಸಿ ಆಸ್ಪತ್ರೆಯಲ್ಲೂ ಕೊರೊನಾ ಟೆಸ್ಟಿಂಗ್
ಉಡುಪಿ ಮೇ.20: ಸತತ ಒತ್ತಡಗಳ ನಂತರ ಉಡುಪಿ ಜಿಲ್ಲೆಯ ಮಣಿಪಾಲ ಕೆಎಂಸಿಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಆರಂಭವಾಗಿದೆ. ಕೊರೊನಾ ಪ್ರಕರಣ ಪತ್ತೆ ನಂತರ ಉಡುಪಿ ಜಿಲ್ಲೆ ತನ್ನ ಕೊರೊನಾ ಪರೀಕ್ಷೆಗಳಿಗೆ ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಅವಲಂಭಿತವಾಗಿತ್ತು.
ಈ ನಡುವೆ ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಆರಂಭಕ್ಕೆ ಭಾರಿ ಒತ್ತಡ ಬಂದಿತ್ತು. ದೇಶದಲ್ಲೇ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ಮಣಿಪಾಲದ ಕೆಎಂಸಿ ಆಸ್ಪತ್ರೆ ಕೊರೊನಾ ಟೆಸ್ಟಿಂಗ್ ಲ್ಯಾಬ್ ತೆರೆಯಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಅನುಮತಿ ಕೇಳಿತ್ತು. ಆದರೆ ಎರಡು ತಿಂಗಳ ಒತ್ತಡದ ನಂತರ ಕೆಎಂಸಿಗೆ ಈಗ ಅನುಮೋದನೆ ದೊರೆತಿದೆ.
ಇನ್ನು ಕೆಎಂಸಿ ಲ್ಯಾಬ್ ನಲ್ಲಿ ಇಂದಿನಿಂದ ಕೋವಿಡ್ ಪರೀಕ್ಷೆ ಪ್ರಾರಂಭಗೊಳ್ಳಲಿದ್ದು, ಇದು ಉಡುಪಿ – ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರಯೋಜನಕಾರಿಯಾಗಲಿದೆ. ಕೆಎಂಸಿಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿದ್ದು, ಇಂದಿನಿಂದ ತ್ವರಿತ ಫಲಿತಾಂಶ ವೈದ್ಯರ, ಜಿಲ್ಲಾಡಳಿತದ ಕೈಸೇರಲಿದೆ. ಅಲ್ಲದೆ ಕೆಎಂಸಿ ಪ್ರಯೋಗಾಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಉಪಕರಣಗಳು ಇದೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.