ಅರಬ್ಬೀ ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದ ಮೀನುಗಾರಿಕಾ ಬೋಟ್ 

ಉಡುಪಿ: ಅರಬ್ಬೀ ಸಮುದ್ರದ ನಡುವೆ ಬಂಡೆಗೆ ಮೀನಿಗಾರಿಕಾ ಬೋಟ್ ಡಿಕ್ಕಿಯಾಗಿ ದೋಣಿ ಮುಳುಗಿದ್ದು ಈ ವೇಳೆ ಆರು ಮೀನುಗಾರರನ್ನು ರಕ್ಷಿಸಲಾಗಿದೆ. ಸುಮಾರು 80 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಮೀನುಗಾರಿಕೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮೇ 14 ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ಈ ಬೋಟ್ ತೆರಳಿತ್ತು. ಮೇ 19 ರಂದು ವಾಪಸ್ ಆಗುವಾಗ ಈ ಅವಘಡ ಸಂಭವಿಸಿದೆ.

ರೇಷ್ಮಾ ಖಾರ್ವಿ ಅವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಆಳ ಸಮುದ್ರ ಬೋಟ್ ಇದಾಗಿದ್ದು, ಬೋಟ್ ನ ಸ್ಟೇರಿಂಗ್ ಕಟ್ ಆಗಿ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೋಟ್ ನೀರಿನಲ್ಲಿ ಮುಳುಗಿದ್ದು, ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರಿಂದ ಬೋಟ್ ನಲ್ಲಿದ್ದ 6 ಮಂದಿಯನ್ನು ರಕ್ಷಣೆ ಮಾಡಲಾಗಿದೆ.