UDUPI
ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ
ಉಡುಪಿ, ನವೆಂಬರ್ 01 : ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಉಡುಪಿ ಜಿಲ್ಲೆ ಇವರ ವತಿಯಿಂದ 68 ನೇ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವು ಇಂದು ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳಕರ್ ಧ್ವಜಾರೋಹಣ ನೆರವೇರಿಸಿ, ಕರ್ನಾಟಕ ರಾಜ್ಯೋತ್ಸವದ ಸಂದೇಶ ನೀಡಿದರು.
ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಾಡಿನ ಯುವ ಸಮುದಾಯದ ಮೇಲಿದೆ. ಭಾಷೆ ನವ ಚೈತನ್ಯವನ್ನು ಮೂಡಿಸಿಕೊಂಡು ಬೆಳೆಯಬೇಕಾದರೆ ಅದು ಯುವ ಸಮುದಾಯದಿಂದ ಮಾತ್ರ ಸಾಧ್ಯ. ಯುವ ಜನರು ತಮ್ಮ ದೈನಂದಿನ ಜೀವನದಲ್ಲಿ ಕನ್ನಡ ಬಳಸುವುದರಿಂದ ಮಾತ್ರ ಸಾಧ್ಯ. ನಮ್ಮ ಜಿಲ್ಲೆಯಲ್ಲಿ ಕನ್ನಡ ಭಾಷೆಯೊಂದೇ ಇಲ್ಲ. ಸ್ಥಳೀಯ ಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ ಮತ್ತಿತರ ಭಾಷೆಗಳಿವೆ. ಇವೆಲ್ಲವನ್ನು ಬೇರೆ ಎಂದು ನಾವು ಎಂದೂ ಭಾವಿಸಿಯೇ ಇಲ್ಲ. ಈ ಅಚ್ಚ ಕನ್ನಡದ ಜಿಲ್ಲೆಯಲ್ಲಿ ಯಾರನ್ನೂ “ಇವನಾರವ ಇವನಾರವ ಎನ್ನದೇ” ಅಣ್ಣ ಬಸವಣ್ಣ ಹೇಳಿದಂತೆ “ಇವ ನಮ್ಮವ- ಇವ ನಮ್ಮವ’ ಎಂದು ಕೊಂಡಿದ್ದೇವೆ.
ತಾಳಮದ್ದಳೆಯಲ್ಲಿ ರೂಪುಗೊಳ್ಳುವ ಸಂಭಾಷಣೆಗೆ ಕಲಾವಿದರೆ ಸ್ವಯಂ ಪ್ರತಿಭೆಯಿಂದ ಸೃಷ್ಟಿಸಿ, ಬರವಣಿಗೆಯಿಲ್ಲದೇ ಒಬ್ಬರ ಬಾಯಿಂದ ಪರಿಚಯಿಸಿ, ಮೌಖಿಕ ಸಾಹಿತ್ಯ ರಚಿಸಿದ್ದಾರೆ. ಯಕ್ಷಗಾನ ಪ್ರಸಂಗ ಕರ್ತರು ತಮ್ಮ ಹೆಸರನ್ನು ಬಹಿರಂಗಪಡಿಸದೇ ಕನ್ನಡದಲ್ಲಿ 5,000 ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಇವುಗಳು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಅಮೋಘ ಕೊಡುಗೆಯೆಂದರೆ ತಪ್ಪಾಗಲಾರದು. ಪ್ರಕೃತಿ ಏರುಪೇರುಗಳಿಂದಾಗಿ ವಾಡಿಕೆ ಮಳೆ ಬಾರದೇ ರಾಜ್ಯದ 220ಕ್ಕೂ ಹೆಚ್ಚು ತಾಲೂಕುಗಳಲ್ಲಿ ಮಳೆಯು ಕುಂಠಿತವಾಗಿ
ಬರದ ಛಾಯೆ ಕಾಣಿಸುತ್ತಿದೆ. ತಾಲೂಕು ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಿ, ಬರ ನಿರ್ವಹಣೆಗೆ ಮುಂದಾಗಲಾಗುವುದು. ನಮ್ಮ ರೈತರು ನೀರು ಸಂರಕ್ಷಣೆ, ಮಳೆ ಕೊಯ್ಲು, ಜಲ ಮರು ಸಂರಕ್ಷಣೆ, ವನ ಸಂರಕ್ಷಣೆಗೆ ಒತ್ತು ನೀಡಬೇಕು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಯು 4418 ಮಿ.ಮೀ ಇದ್ದರೆ, 3332 ಮೀ.ಮಿ ರಷ್ಟು ಮಳೆಯಾಗಿ ಶೇ. 25 ಮಳೆಯ ಕೊರತೆಯಾಗಿದೆ. ಈಗಾಗಲೇ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳನ್ನು ಪೂರ್ಣ ಬರ ಪೀಡಿತ ಹಾಗೂ ಬ್ರಹ್ಮಾವರ ತಾಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಕಾರ್ಕಳದಲ್ಲಿ 4103 ಹೆ., ಹೆಬ್ರಿಯಲ್ಲಿ 1283.00 ಹೆ. ಹಾಗೂ ಬ್ರಹ್ಮಾವರ ತಾಲೂಕಿನ 8551.00 ಹೆ. ಒಟ್ಟಾರೆ 13937.00 ಹೆ. ಭತ್ತದ ಬೆಳೆ ಹಾನಿ ಅಂದಾಜಿಸಿದ್ದು, 11.85 ಕೋಟಿ ರೂ. ಪರಿಹಾರ ಅನುದಾನ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು, ಬಜೆ ಡ್ಯಾಂ ಹೂಳು ತೆಗೆಯಲು ಟೆಂಡರ್ ಕರೆಯಲಾಗಿದೆ. ವಾರಾಹಿಯಿಂದ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು ಫೆಬ್ರವರಿಯಲ್ಲಿ ಮುಗಿಸಲು ಸೂಚಿಸಲಾಗಿದೆ. ಜನಸಾಮಾನ್ಯರೂ ಸಹ ನೀರಿನ ಮಿತ ಬಳಕೆಗೆ ಮುಂದಾಗಬೇಕು.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 28,387 ಅಂತ್ಯೋದಯ ಕಾರ್ಡ್ ಹಾಗೂ 1,68,833 ಆದ್ಯತಾ ಪಡಿತರ ಚೀಟಿಯಲ್ಲಿ , 6,77,004 ಫಲಾನುಭವಿಗಳಿಗೆ 05 ಕೆಜಿ ಅಕ್ಕಿ ಹಾಗೂ ಅಂತ್ಯೋದಯ ಕಾರ್ಡಿಗೆ 35 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಇವುಗಳ ಜೊತೆಗೆ ಹೆಚ್ಚುವರಿಯಾಗಿ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ. ಯಂತೆ ಆಹಾರಧಾನ್ಯದ ಬದಲಾಗಿ ನೇರ ನಗದು ವರ್ಗಾವಣೆಯಡಿ ಫಲಾನುಭವಿಗಳಿಗೆ ಕಳೆದ ಮೂರು ತಿಂಗಳಿನಿಂದ ಈವರೆಗೆ 35.45 ಕೋಟಿ ರೂ. ಅನುದಾನವನ್ನು ಅವರ ಖಾತೆಗಳಿಗೆ ವರ್ಗಾಯಿಸಲಾಗಿದೆ.
ಜಿಲ್ಲೆಯಲ್ಲಿ 3,67,343 ವಿದ್ಯುತ್ ಗೃಹ ಬಳಕೆದಾರರಿದ್ದು, ಅವರುಗಳಲ್ಲಿ 306106 ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಂಡು ಕಳೆದ ಆಗಸ್ಟ್ -ಸೆಪ್ಟಂಬರ್ ಮಾಹೆಯ ಒಟ್ಟು 34.82 ಕೋಟಿ ರೂ ಮೊತ್ತ ರಿಯಾಯಿತಿ ನೀಡಲಾಗಿದ್ದು, ಇದನ್ನು ರಾಜ್ಯ ಸರ್ಕಾರವೇ ಭರಿಸಿದೆ.
ಗೃಹಲಕ್ಷ್ಮೀ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 2.13 ಲಕ್ಷ ಫಲಾನುಭವಿಗಳ ನೋಂದಣಿಯಾಗಿದ್ದು, 1.77 ಲಕ್ಷ ಫಲಾನುಭವಿಗಳ ಖಾತೆಗೆ 40.67 ಕೋಟಿ ರೂ. ಹಣ ಜಮಾ ಮಾಡಿ, ಶೇ. 88 ರಷ್ಟು ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಕಳೆದ ಜೂನ್ ಮಾಹೆಯಿಂದ ಈವರೆಗೆ 43.20 ಲಕ್ಷ ಮಹಿಳಾ ಪ್ರಯಾಣಿಕರು ಸದುಪಯೋಗ ಪಡೆದುಕೊಂಡಿದ್ದು, ಇದಕ್ಕೆ ಸರ್ಕಾರ 15.84 ಲಕ್ಷ ರೂ. ಭರಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಐ.ಸಿ.ಡಿ.ಎಸ್ ಯೋಜನೆಯಡಿ ಒಟ್ಟು 62,246 ಫಲಾನುಭವಿಗಳ ಗುರಿಯಿದ್ದು, 55,200 ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸಿ ಶೇ.89 ರಷ್ಟು ಸಾಧನೆ ಮಾಡಲಾಗಿದೆ. ಅಂತೆಯೇ ಮಾತೃಪೂರ್ಣ ಯೋಜನೆಯಡಿ ಒಟ್ಟು 11,763 ಫಲಾನುಭವಿಗಳ ಗುರಿಯಿದ್ದು, 11,282 ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ
ಒದಗಿಸಿ ಶೇ.86 ರಷ್ಟು ಸಾಧನೆ ಮಾಡಲಾಗಿರುತ್ತದೆ.