LATEST NEWS
ಉಡುಪಿ ಜಿಲ್ಲೆಯಲ್ಲಿ ಸುಂಟರಗಾಳಿಗೆ ಬೆಚ್ಚಿಬಿದ್ದ ಜನ -ಧರೆಗುರುಳಿದ ಮರಗಳು ಅಪಾರ ಹಾನಿ

ಉಡುಪಿ ಎಪ್ರಿಲ್ 14: ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ಸುಂಟರಗಾಳಿ ಸಹಿತ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ ದಿಢೀರ್ ಬಿಸಿದ ಸುಂಟರಗಾಳಿಗೆ ಜನರು ಭಯಭೀತರಾಗಿದ್ದು, ರಸ್ತೆಗಳಲ್ಲಿ ಧೂಳಿನಿಂದಾಗಿ ಸಂಚಾರಕ್ಕೆ ಸಂಕಷ್ಟವಾಗಿತ್ತು.
ಹಿರಿಯಡಕದಲ್ಲಿ ಮಧ್ಯಾಹ್ನ ಬೀಸಿದ ಭಾರೀ ಗಾಳಿಗೆ ಪಡುಭಾಗ ಗರಡಿ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಮುಂಡುಜೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಯಿಲಾಡಿ ಭಾಗದಲ್ಲಿ ಗಾಳಿಗೆ ನೂರಾರು ಅಡಿಕೆ ಮರಗಳು ಬಿದ್ದು ಭಾರಿ ನಷ್ಟ ಉಂಟಾಗಿದೆ. ಕಾರ್ಕಳ, ಮಣಿಪಾಲ, ಹಿರಿಯಡ್ಕ, ಉಡುಪಿ ಪಟ್ಟಣ ಮತ್ತು ಬ್ರಹ್ಮಾವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಯಿತು. ಗಾಳಿ ವಿಶೇಷವಾಗಿ ಪ್ರಬಲವಾಗಿದ್ದ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಬಲವಾದ ಗಾಳಿಯ ನಂತರ ತಕ್ಷಣವೇ ಮಳೆ ಪ್ರಾರಂಭವಾಯಿತು.
ಮಲ್ಪೆ ಪರಿಸರದಲ್ಲೂ ಸುಂಟರಗಾಳಿ ಸಹಿತ ಮಳೆ ಸುರಿದಿದ್ದು ಮರಗಳು ಧರೆಗೆ ಒರಗಿ ಮನೆಗಳಿಗೆ ಹಾನಿಯಾಗಿವೆ.ನೂರಾರು ಕಡ ವಿದ್ಯುತ್ ತಂತಿಗಳ ಮೇಲೆ ಮರಗಳು ಒರಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ವಿದ್ಯುತ್ ವ್ಯತ್ಯಯದಿಂದ ಜನರು ಪರದಾಡಬೇಕಾದ ಸ್ಥಿತಿ ಬಂದಿದೆ. ಮಳೆ ಸುರಿದ ಬಳಿಕ ಬೇಸಗೆಯಲ್ಲಿ ತಣ್ಣನೆಯ ವಾತಾವರಣ ನಿರ್ಮಾಣವಾಗಿದೆ.

ಉಡುಪಿ ನಗರದಾದ್ಯಂತ ಹಲವಾರು ಫ್ಲೆಕ್ಸ್ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳು ಹರಿದುಹೋಗಿವೆ. ಮಣಿಪಾಲ ಮತ್ತು ನಗರ ಬಸ್ ನಿಲ್ದಾಣದಲ್ಲಿ, ಬಲವಾದ ಗಾಳಿಯಿಂದಾಗಿ ಫ್ಲೆಕ್ಸ್ ಬ್ಯಾನರ್‌ಗಳು ಮತ್ತು ಕಂಬಗಳು ಸಂಪೂರ್ಣವಾಗಿ ನೆಲಕ್ಕುರುಳಿವೆ.