UDUPI
ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಗೆ ಜಲಾವೃತವಾದ ತಗ್ಗು ಪ್ರದೇಶ
ಉಡುಪಿ ಜುಲೈ 4: ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜಲಾವೃತ ಗೊಂಡಿದೆ. ಈಗಾಗಲೇ ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ವಿಸ್ತರಣೆ ಮಾಡಿದೆ.
ಉಡುಪಿ ನಗರದ ಬೈಲಕೆರೆ, ಕಲ್ಸಂಕ, ಬನ್ನಂಜೆ, ನಿಟ್ಟೂರು ವ್ಯಾಪ್ತಿಯಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ನಗರದ ಒಳಗೆ ಹಾದು ಹೋಗುವ ಇಂದ್ರಾಣಿ ನದಿ ಮೈತುಂಬಿ ಹರಿಯುತ್ತಿದ್ದು, ಸುತ್ತಮುತ್ತಲ ಮನೆಗಳಿಗೆ ನೀರು ನುಗ್ಗಿದೆ. ಸ್ಥಳೀಯರ ಮಾಹಿತಿ ಪ್ರಕಾರ ಪ್ರತಿ ವರ್ಷ ಮಳೆಗಾಲದಲ್ಲಿ ನದಿ ನೀರು ಮನೆಗೆ ನುಗ್ಗುತ್ತದೆ. ಸುಮಾರು ಒಂದು ವಾರಗಳ ಕಾಲ ನೆರೆ ಇರುತ್ತದೆ. ಈ ಬಗ್ಗೆ ನಗರಸಭೆಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಲುವೆಯ ಹೂಳನ್ನು ಎತ್ತಬೇಕು, ಅಡ್ಡಲಾಗಿ ಕಟ್ಟಿದ ತಡೆಗೋಡೆಯನ್ನು ಇನ್ನೂ ಮೇಲಕ್ಕೆ ಏರಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಆಸುಪಾಸಿನಲ್ಲಿ ಕೂಡ ಕೃತಕ ನೆರೆ ಸೃಷ್ಟಿಯಾಗಿದೆ. ರಸ್ತೆ ಕಾಮಗಾರಿ ಒಳಚರಂಡಿ ಸೇತುವೆ ಕಾಮಗಾರಿ ಬಾಕಿ ಇರುವಲ್ಲಿ ಸುತ್ತಮುತ್ತಲ ಗದ್ದೆಗಳಿಗೆ, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸಮುದ್ರ ಮತ್ತು ನದಿ ಪಾತ್ರದ ಜನ ಜಾಗರೂಕರಾಗಿರಬೇಕು ಎಂದು ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ