LATEST NEWS
ಡಬ್ಬಲ್ ಮರ್ಡರ್ ಗೆ ಪೊಲೀಸ್ ನಂಟು : ಡಿಎಆರ್ ನ ಇಬ್ಬರು ಕಾನ್ ಸ್ಟೇಬಲ್ ಗಳ ಬಂಧನ
ಡಬ್ಬಲ್ ಮರ್ಡರ್ ಗೆ ಪೊಲೀಸ್ ನಂಟು : ಡಿಎಆರ್ ನ ಇಬ್ಬರು ಕಾನ್ ಸ್ಟೇಬಲ್ ಗಳ ಬಂಧನ
ಉಡುಪಿ, ಫೆಬ್ರವರಿ 11 : ಉಡುಪಿ ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಇತ್ತೀಚೆಗೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರನ್ನು ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಬಂಧಿಸಲಾಗಿದೆ.
ಇದರೊಂದಿಗೆ ಯುವಕರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಎಂಟಕ್ಕೇರಿದೆ. ಪವನ್ ಅಮಿನ್ ಹಾಗೂ ವೀರೇಂದ್ರ ಆಚಾರ್ಯ ಅವರು ಕೊಲೆ ಪ್ರಕರಣದ ಆರೋಪಿಗಳಾದ ಕೋಟ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಗಳಾದ ಹರೀಶ್ ರೆಡ್ದಿ, ರಾಜಶೇಖರ ರೆಡ್ಡಿ, ಮಹೇಶ ಗಾಣಿಗ, ಸಂತೋಷ ಕುಂದರ್ ಮುಂತಾದವರೊಂದಿಗೆ ಒಡನಾಟ ಹೊಂದಿದ್ದರು.
ಕೊಲೆ ನಡೆದ ಜನವರಿ 26ರಂದು ರಾತ್ರಿ ಆರೋಪಿಗಳು ಅವಿತುಕೊಳ್ಳಲು ಪವನ್ ಅಮಿನ್ ಹೆಬ್ರಿಯ ಕುಚ್ಚೂರಿನಲ್ಲಿರುವ ತನ್ನ ಮನೆಯಲ್ಲಿ ಅವಕಾಶ ಕಲ್ಪಿಸಿದ್ದ.
ಮರುದಿನ ಬೆಳಗ್ಗೆ ಹರೀಶ್ ರೆಡ್ಡಿಯು ಪವನ್ ಅಮಿನ್ ಗೆ ದೂರವಾಣಿ ಕರೆ ಮಾಡಿ ಮೊಬೈಲ್ ಫೋನ್ ಮತ್ತು ಸಿಮ್ ಸಹಿತ ಕೆಲವು ಸಾಮಗ್ರಿಗಳನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದ.
ಅದರಂತೆ ಅವುಗಳನ್ನು ಪ್ರಣವ್ ಭಟ್ ಎಂಬಾತನ ಮೂಲಕ ಪವನ್ ಅಮಿನ್ ಕಳುಹಿಸಿಕೊಟ್ಟಿದ್ದ.
ಜ.27ರಂದು ರಾತ್ರಿ ಪವನ್ ಅಮಿನ್ ಇನ್ನೋರ್ವ ಆರೋಪಿ ವೀರೇಂದ್ರ ಆಚಾರ್ಯನೊಂದಿಗೆ ಸೇರಿ ಕೊಲೆ ಆರೋಪಿಗಳಿಗೆ ಕಾರೊಂದನ್ನು ವ್ಯವಸ್ಥೆ ಮಾಡಿದ್ದ.
ಬಳಿಕ ಆರೋಪಿಗಳನ್ನು ಆಗುಂಬೆ ಎನ್.ಆರ್ ಪುರದ ಮಲ್ಲಂದೂರಿನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಜ.28ರಂದು ಅಲ್ಲಿಗೆ ಕರೆದೊಯ್ದಿದ್ದಾನೆ.
ಪವನ್ ಮತ್ತು ವೀರೇಂದ್ರ ರನ್ನು ಭಾನುವಾರ ಬಂಧಿಸಿ ಅವರಿಂದ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಫೋನ್ ಸಹಿತ ಕೆಲವು ವಸ್ತುಗಳನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ಯದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.15ರ ತನಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.