LATEST NEWS
ಅನಿವಾಸಿ ಭಾರತೀಯನಿಗೆ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ : ಆರೋಪಿಯ ಜಾಮೀನು ರದ್ದು ಮಾಡಿದ ಉಡುಪಿ ಜಿಲ್ಲಾ ನ್ಯಾಯಾಲಯ
ಉಡುಪಿ, ಆಗಸ್ಟ್ 18 : ಅನಿವಾಸಿ ಭಾರತೀಯರೊಬ್ಬರ ದುಬೈಯ ಹೋಟೆಲ್‌ನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನಾಗೇಶ್ ಪೂಜಾರಿ(31) ಎಂಬಾತನಿಗೆ ಕೆಳ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ರದ್ದುಗೊಳಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ರದ್ದುಗೊಳಿಸಿದೆ.
ಕುಂದಾಪುರ ಮೂಲದ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಆಡಳಿತ ನಿರ್ದೇಶಕರಾಗಿರುವ ದುಬೈನ ಹೋಟೆಲೊಂದಕ್ಕೆ ಅಕೌಂಟೆಂಟ್ ಆಗಿ ಸೇರಿ ಹಂತಹಂತವಾಗಿ 2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣದ ಆರೋಪಿ ಬಾರ್ಕೂರು ಮೂಲದ ನಾಗೇಶ್ ಪೂಜಾರಿ(31) ಎಂಬಾತನಿಗೆ ಬ್ರಹ್ಮಾವರ ಜೆಎಂಎಫ್‌ಸಿ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ರದ್ದುಗೊಳಿಸಿ ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ದುಬೈನ ಫಾರ್ಚ್ಯೂನ್ ಗ್ರೂಫ್ ಆಫ್ ಹೋಟೆಲ್ಸ್ ಸಂಬಂಧಿತ ಹೋಟೆಲೊಂದರ ಉದ್ಯೋಗಿ ನಾಗೇಶ್ ಪೂಜಾರಿಯು 2.5 ಕೋಟಿಗೂ ಅಧಿಕ ಹಣ ವಂಚಿಸಿದ್ದು ಈ ಬಗ್ಗೆ ಹೋಟೆಲ್ ಮ್ಯಾನೇಜರ್ ಸುನೀಲ್ ಕುಮಾರ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು. ಆರೋಪಿ ನಾಗೇಶ್ ಪೂಜಾರಿ ಹೈಕೋರ್ಟ್‌ನಲ್ಲಿ ಎಫ್.ಐ.ಆರ್. ಮೇಲಿನ ತನಿಖೆ ಸ್ಥಗಿತಗೊಳಿಸಲು ಅರ್ಜಿ ದಾಖಲಿಸಿದ್ದು 2023 ಜುಲೈನಲ್ಲಿ ಆ ಅರ್ಜಿ ವಜಾಗೊಳಿಸಲಾಗಿತ್ತು. ಬಳಿಕ ಆರೋಪಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಕುಂದಾಪುರ ದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿತ್ತು. ಹೈಕೋರ್ಟ್ ಮತ್ತು ಸೆಶನ್ಸ್ ನ್ಯಾಯಾಲಯದ ಆದೇಶಗಳನ್ನು ಮರೆಮಾಚಿ 2023ರ ಆಗಸ್ಟ್ ತಿಂಗಳಿನಲ್ಲಿ ಬ್ರಹ್ಮಾವರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದುಕೊಂಡಿದ್ದನು. ಈ ಜಾಮೀನು ಆದೇಶವನ್ನು ಸರಕಾರ ಪ್ರಶ್ನಿಸಿ ಪರಿಷ್ಕೃತ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ವಾದ-ಪ್ರತಿವಾದ ಆಲಿಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಜೆ.ಎಂ.ಎಫ್.ಸಿ ನ್ಯಾಯಾಲಯ ನೀಡಿದ ಜಾಮೀನು ರದ್ದುಗೊಳಿಸಿ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದ ಮಂಡಿಸಿದ್ದರು.