LATEST NEWS
ಸಹಕಾರಿ ಕ್ಷೇತ್ರದಿಂದ ರೈತರಿಗೆ ನೇರವಾಗಿ ನೆರವು: ಹೆಚ್.ಡಿ.ರೇವಣ್ಣ

ಸಹಕಾರಿ ಕ್ಷೇತ್ರದಿಂದ ರೈತರಿಗೆ ನೇರವಾಗಿ ನೆರವು: ಹೆಚ್.ಡಿ.ರೇವಣ್ಣ
ಉಡುಪಿ, ಜನವರಿ 29: ಕಳೆದ ನಾಲ್ಕೈದು ವರ್ಷದ ಬರಗಾಲದ ಸಂದರ್ಭದಲ್ಲಿ ಹಾಲಿನ ಡೈರಿ ಇರುವುದರಿಂದಲೇ ರೈತಾಪಿ ವರ್ಗ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ರಾಜ್ಯದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಅವರು ಇಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದಲ್ಲಿ ಉಪ್ಪೂರಿನಲ್ಲಿ ನೂತನ 2.5 ಲಕ್ಷ ಲೀಟರ್ ಸಾಮರ್ಥ್ಯದ ಡೇರಿಯ ಉದ್ಘಾಟನೆ ನೇರವೇರಿಸಿ ಮಾತನಾಡಿದರು.

ರೈತರಿಗೆ ನೇರವಾಗಿ ನೆರವಾಗುವುದು ಸಹಕಾರಿ ಕ್ಷೇತ್ರ. ಹಾಲಿಗೆ ಸರಕಾರದಿಂದ ನೀಡುವ 5 ರೂ ಪ್ರೋತ್ಸಾಹ ಧನವನ್ನು ಇನ್ನು 1 ರೂ ಹೆಚ್ಚಿಸಬೇಕೆಂದು ಸರಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಾಲ್ಕುವರೆ ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ಬಡ್ಡಿ ರಹಿತ ಸಾಲ ನೀಡಬೇಕೆಂದು ಯೋಜನೆ ರೂಪಿಸಲಾಗುತ್ತಿದೆ. ಕರ್ನಾಟಕದಲ್ಲಿ 70 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 40000 ಸಾವಿರ ಲೀ. ಹಾಲು ಮಾರಾಟವಾಗುತ್ತಿದ್ದು, 30000 ಲೀ ಹಾಲು ಕನ್ವರ್ಷನ್ ಗೆ ಹೋಗುವುದರಿಂದ ಡೇರಿಗಳು ನಷ್ಟ ಅನುಭವಿಸುವಂತಾಗಿದೆ. ರೈತರಿಗೆ ನೆರವು ನೀಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೀತಿಯ ಸಹಕಾರಿ ಕ್ಷೇತ್ರವು ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ರೇವಣ್ಣ ತಿಳಿಸಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದಲ್ಲಿ ಅಗತ್ಯವಿರುವಷ್ಟು ಹಾಲಿನ ಉತ್ಪಾದನೆ ಇದ್ದರೂ, ಇತರೆ ರಾಜ್ಯಗಳಿಂದ ಬರುವ ಹಾಲನ್ನು ಕಲಬೆರಕೆ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಇಂತವರನ್ನು ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ರಾಜ್ಯದಲ್ಲಿ ಸಾಕಷ್ಟು ಹಾಲು ಉತ್ಪಾದಿಸಲಾಗುತ್ತಿದ್ದು, ಹೊರ ರಾಜ್ಯದಿಂದ ಬರುವ ಹಾಲನ್ನು ತಡೆಯುವ ಪ್ರಯತ್ನ ಮಾಡಬೇಕೆಂದು ವಿನಂತಿಸಿದರು.
ಕೃಷಿ ಕೈಗೊಳ್ಳುವ ಸಂದರ್ಭದಲ್ಲಿ ಪರ್ಯಾಯ ಹಣಕಾಸಿನ ವ್ಯವಸ್ಥೆಯಾಗಿ ಪಶು ಸಂಗೋಪನೆಯು ರೈತರನ್ನು ಸಶಕ್ತಗೊಳಿಸಲು ಉತ್ತಮ ಕ್ಷೇತ್ರವಾಗಿದ್ದು. ಇದನ್ನು ಇನ್ನಷ್ಟು ಬೆಳೆಸುವ ಕೆಲಸವಾಗ ಬೇಕು ಎಂದರು.