ಫೆಬ್ರವರಿ 9 ರಿಂದ ಧರ್ಮಸ್ಥಳ ಬಾಹುಬಲಿಗೆ ಮಹಾಮಸ್ತಕಾಭಿಷೇಕ

ಧರ್ಮಸ್ಥಳ ಜನವರಿ 30: ಹೆಸರಾಂತ ಪುಣ್ಯಕ್ಷೇತ್ರ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾದ ವೈರಾಗ್ಯ ಮೂರ್ತಿ, ತ್ಯಾಗದ ಸಂಕೇತವಾದ ಬಾಹುಬಲಿಯ ಮಹಾ ಮಸ್ತಕಾಭಿಷೇಕದ ಎಲ್ಲಾ ಸಿದ್ಧತೆಗಳು ಅಂತಿಮ ಹಂತ ತಲುಪಿದೆ.

ಫೆಬ್ರವರಿ 9 ರಿಂದ 19 ರ ವರೆಗೆ ನಡೆಯಲಿರುವ ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ದೇಶ ಹಾಗೂ ವಿದೇಶದ ಲಕ್ಷಾಂತರ ಮಂದಿ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಎಲ್ಲಾ ಜನರಲ್ಲೂ ಶಾಂತಿ, ಸಂಯಮ, ಸಹನೆ,ಸಹಭಾಳ್ವೆಯ ಸಂದೇಶವನ್ನು ಕೊಡುವ ಮುಖ್ಯ ಉದ್ಧೇಶದಿಂದ ಈ ಮಹಾ ಮಸ್ತಕಾಭಿಷೇಕವನ್ನು ಮಾಡಲಾಗುತ್ತಿದೆ.

ಫೆಬ್ರವರಿ 9 ರಿಂದ ಮಸ್ತಕಾಭಿಷೇಕ 19 ರ ವರೆಗೆ ನಡೆಯಲಿದೆ. ಫೆಬ್ರವರಿ 8 ರಂದು ಸಂತ ಸಮ್ಮೇಳನ ನಡೆಯಲಿದೆ. ಈ ಅಭೂತಪೂರ್ವ ಕ್ಷಣದಲ್ಲಿ ಭಾಗಿಯಾಗಲು ದೇಶ ಹಾಗೂ ವಿದೇಶದಿಂದ ಲಕ್ಷಾಂತರ ಮಂದಿ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಮಹಾ ಮಸ್ತಕಾಭಿಷೇಕದ ಹಿನ್ನಲೆಯಲ್ಲಿ ರತ್ನಗಿರಿ ಬೆಟ್ಟದಲ್ಲಿ ಎಲ್ಲಾ ಸಿದ್ಧತೆಗಳನ್ನೂ ಮಾಡಲಾಗಿದ್ದು, ಅಂತಿಮ ಸಿದ್ಧತೆಗೆ ಕ್ಷಣಗಣನೆಯೂ ಆರಂಭಗೊಂಡಿದೆ.

ಬಾಹುಬಲಿಗೆ ಮಜ್ಜನಾಭೀಷೇಕ ಮಾಡಲು ಅನುಕೂಲವಾಗುವಂತೆ ವಿಗ್ರಹದ ಸುತ್ತಲೂ ಅಟ್ಟಣಿಗೆ ಕಟ್ಟುವ ಕಾಮಗಾರಿಯು ಈಗಾಗಲೇ ಕೊನೆಯ ಹಂತದಲ್ಲಿದೆ. ಅಲ್ಲದೆ ಈ ಮಜ್ಜನವನ್ನು ಯಾವುದೇ ಅಡೆತಡೆಯಿಲ್ಲದೆ ಭಕ್ತಾಧಿಗಳು ವೀಕ್ಷಿಸಲು ಗ್ಯಾಲರಿಯ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಮಸ್ತಕಾಭಿಷೇಕದ ಜೊತೆಗೆ ಬಾಹುಬಲಿಯ ಶಾಂತಿ, ಸಾಮರಸ್ಯೆ, ಸಹನೆ,ಸಂಯಮದ ಸಂದೇಶವನ್ನೂ ಜನತೆಗೆ ನೀಡುವ ಉದ್ಧೇಶವನ್ನೂ ಈ ಸಂಭ್ರಮ ಹೊಂದಿಕೊಂಡಿದೆ.

ಸಮಾರಂಭದ ಹಿನ್ನಲೆಯಲ್ಲಿ ಸಂತ ಸಮ್ಮೇಳನವೂ ನಡೆಯಲಿದ್ದು, ವಿವಿಧ ಧರ್ಮಗುರುಗಳೂ ಈ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ವಿನೂತನವಾದ ಮೆರವಣಿಗೆಯನ್ನೂ ಕಾರ್ಯಕ್ರಮದ ಹಿನ್ನಲೆಯಲ್ಲಿ ಜೋಡಿಸಿಕೊಳ್ಳಲಾಗಿದ್ದು, ಜಾನಪದ ಕಲಾ ತಂಡಗಳ ಜೊತೆಗೆ ಬಾಹುಬಲಿಯ ಜೀವನ ವೃತ್ತಾಂತದ ದೃಶ್ಯರೂಪಕವನ್ನೂ ಮೆರವಣಿಗೆಯಲ್ಲಿ ಸಾದರಪಡಿಸುವ ಪ್ರಯತ್ನವೂ ನಡೆಯಲಿದೆ.

ಮಹಾಮಸ್ತಕಾಭಿಷೇಕ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಇಡೀ ಜಿಲ್ಲಾಡಳಿತವೂ ಹಲವು ವ್ಯವಸ್ಥೆಗಳನ್ನು ಮಾಡಿದೆ. ರಕ್ಷಣೆ ಹಾಗೂ ಬಂದೋಬಸ್ತ್ ಗಾಗಿ ಪೋಲೀಸ್ ಇಲಾಖೆ ಸನ್ನದ್ಧವಾಗಿದ್ದು, ಗೃಹರಕ್ಷಕ ಇಲಾಖೆಯೂ ಪೋಲೀಸ್ ಇಲಾಖೆಯ ಜೊತೆಗೆ ಕೈಜೋಡಿಸಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಯಾವುದೇ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಹೊಸ ರಸ್ತೆಗಳ ನಿರ್ಮಾಣ ಕಾರ್ಯವೂ ಭರದಿಂದ ಸಾಗುತ್ತಿದೆ. ಲೋಕೋಪಯೋಗಿ ಇಲಾಖೆಯು ಸುಮಾರು 23 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೊಂಡಿದ್ದು, ಪ್ರವಾಸೋಧ್ಯಮ ಇಲಾಖೆಯಿಂದಲೂ 2 ಕೋಟಿ ರೂಪಾಯಿ ಅನುದಾನದ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ.

ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿರುವ ಬಾಹುಬಲಿಗೆ ಇದು ನಾಲ್ಕನೇ ಮಹಾ ಮಸ್ತಕಾಭಿಷೇಕವಾಗಿದೆ. ಈ ಬಾರಿ ಹಲವು ವಿಶೇಷತೆಗಳ ಮೂಲಕ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಲಕ್ಷಾಂತರ ಮಂದಿ ಜನರ ಆಗಮನದ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ.

Facebook Comments

comments