LATEST NEWS
ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ತಡೆಗೆ ಕಟ್ಟುನಿಟ್ಟಿನ ಕ್ರಮ:ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ ಮಾಚ್ 18 : ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಸೂಚಿಸಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಅವರು ನಿನ್ನೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಜಿಲ್ಲೆಯಲ್ಲಿ ಕೋವಿಡ್ 2 ನೇ ಅಲೆ ಹರಡುವಿಕೆಯನ್ನು ನಿಯಂತ್ರಿಸುವ ಕುರಿತು ಕೈಗೊಳ್ಳಬೆಕಾದ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮಾಸ್ಕ್ ಧರಿಸದವರ ವಿರುದ್ದ ನಿಗಧಿತ ದಂಡ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಗರ ಸ್ಥಳಿಯ ಸಂಸ್ಥೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ದಂಡ ವಿದಿಸುವ ಅಧಿಕಾರವನ್ನು ವಿವಿಧ ಅಧಿಕಾರಿಗಳಿಗೆ ಈಗಾಗಲೇ ಪ್ರತ್ಯಾಯೋಜನೆ ಮಾಡಿದ್ದು, ದಂಡ ವಿಧಿಸದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು , ಈಗಾಗಲೇ ಸುತ್ತೋಲೆಯಲ್ಲಿ ತಿಳಿಸಿರುವಂತೆ ಸಭೆ ಸಮಾರಂಭಗಳಲ್ಲಿ ನಿಗಧಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದಲ್ಲಿ ಸಂಬಂದಪಟ್ಟವರ ವಿರುದ್ದ ದಂಡ ವಿಧಿಸುವಂತೆ ಸೂಚಿಸಿದ ಅವರು , ಅಧಿಕಾರಿಗಳು ಸಪರ್ಮಕವಾಗಿ ಕಾರ್ಯ ನಿರ್ವಹಿಸುವ ಕುರಿತು ಪರಿಶೀಲಿಸಲು ನೋಡೆಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದರು.
ಎಲ್ಲಾ ಅಂಗಡಿ , ಮಾಲ್ ಗಳಲ್ಲಿನ ಸಂಸ್ಥೆಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಹಾಗೂ ಗ್ರಾಹಕರಿಗೂ ಮಾಸ್ಕ್ ಧರಿಸುವಂತೆ ಸೂಚಿಸಬೇಕು , ಮಾಸ್ಕ್ ಧರಿಸದೇ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಟ್ರೇಡ್ ಲೈಸೆನ್ಸ್ ರದ್ದುಗೊಳಿಸುವದು ಸೇರಿದಂತೆ ಎಪಿಡಮಿಕ್ ಕಾಯ್ದೆಯನುಸಾರ ಸಹ ಕ್ರಮ ಕೈಗೊಳ್ಳಲಾಗುವುದು. ಅಂಗಡಿ ಮತ್ತು ಮಾಲ್ ಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಎಲ್ಲಾ ಹಿರಿಯ ನಾಗರೀಕರಿಗೆ ಕೋವಿಡ್ ಲಸಿಕೆ ನೀಡುವ ಕುರಿತಂತೆ ನಗರಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು , ಮನೆಗಳಲ್ಲಿರುವ ಹಿರಿಯ ನಾಗರೀಕರು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಹೆಳಿದರು.
ಕೋವಿಡ್ ನಿಯಂತ್ರಿಸುವ ಕುರಿತಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಅಧಿಕಾರಗಳನ್ನು ನೀಡಿದ್ದು, ಅಧಿಕಾರಿಗಳು ತಮಗೆ ನೀಡಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಿಸಿಕೊಂಡು, ಸರ್ಕಾರ ಸೂಚಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಿ, ಜಿಲ್ಲೆಯನ್ನು ಕೋವಿಡ್ 2 ನೇ ಅಲೆಯಿಂದ ರಕ್ಷಿಸಲು ಕಾರ್ಯನಿರ್ವಹಿಸಿ, ಜಿಲ್ಲೆಯಲ್ಲಿ ಕೋವಿಡ್ ಮುಕ್ತಗೊಳಿಸಿ. ಸಾರ್ವಜನಿಕರು ಸಹಾ ಜಿಲ್ಲಾಡಳಿತ ಸೂಚಿಸುವ ಕ್ರಮಗಳನ್ನು ತಪ್ಪದೇ ಪಾಲಿಸುವುದರ ಮೂಲಕ ಜಿಲ್ಲೆಯನ್ನು ಕೋವಿಡ್ 2 ನೇ ಅಲೆಯಿಂದ ರಕ್ಷಿಸಲು ಸಹಕಾರ ನೀಡುವಂತೆ ಹೇಳಿದರು.