LATEST NEWS
ಉಡುಪಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇಕಡ 19ಕ್ಕೆ ಇಳಿಕೆ – ಉಡುಪಿ ಜಿಲ್ಲಾಧಿಕಾರಿ

ಉಡುಪಿ ಮೇ 30: ಉಡುಪಿ ಜಿಲ್ಲೆಯಲ್ಲಿ ಸದ್ಯ ಕೊರೋನಾ ಪ್ರಕರಣ ಕಡಿಮೆಯಾಗುತ್ತಿದ್ದು, ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇಕಡ 38 ರಿಂದ ಶೇಕಡ 19ಕ್ಕೆ ಇಳಿದಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್ ಕೊರತೆ ಕಡಿಮೆಯಾಗಿದ್ದು, ಬಳಕೆಯಾಗುತ್ತಿದ್ದ 800ರಷ್ಟು ಆಕ್ಸಿಜನ್ ಸಿಲಿಂಡರ್ 390ಕ್ಕೆ ಇಳಿದಿದೆ ಎಂದರು. ಇನ್ನು ಕೊರೊನಾ ಪ್ರಕರಣಗಳು ಇಳಿಕೆ ಆಗುತ್ತಿರುವ ಸಂದರ್ಭ ಜನರು ಸುಮ್ಮನೆ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದ್ದು, ನಿನ್ನೆ ನಡೆದ ತಪಾಸಣೆಯಲ್ಲಿ ಅನಗತ್ಯ ತಿರುಗಾಡುತ್ತಿದ್ದ 35 ಮಂದಿಯ ವಾಹನ ಮುಟ್ಟು ಗೋಲು ಹಾಕಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯೂ ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸದ್ಯ ಉಡುಪಿ ಜಿಲ್ಲೆಯಲ್ಲಿ ಮುಂದಿನ ಜೂನ್ 7ರ ಒಳಗೆ ಪಾಸಿಟಿವಿಟಿ ರೇಟ್ 10ರ ಒಳಗೆ ತರಬೇಕಿದೆ. ಹೀಗಾದಲ್ಲಿ ಮುಂದಿನ ಲಾಕ್ ಡೌನ್ ತಪ್ಪಿಸಬಹುದು ಎಂದರು. ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಎರಡುವರೆ ಸಾವಿರದ ಬದಲು ಮೂರುವರೆ ಸಾವಿರ ಟೆಸ್ಟ್ ಮಾಡುತ್ತಿದ್ದಾರೆ. ಹೆಚ್ಚು ಕೊರೊನಾ ಪರೀಕ್ಷೆ ನಡೆಸಿ ರೋಗ ಪತ್ತೆ ಹಚ್ಚಲು ಶ್ರಮಿಸುತ್ತಿದ್ದಾರೆ.
ಇನ್ನೊಂದು ಲಾಕ್ ಡೌನ್ ನಿಂದ ತಪ್ಪಿಸಿಕೊಳ್ಳಲು ಇನ್ನಾದರೂ ಜನರು ಸುಮ್ಮನೆ ತಿರುಗಾಡಿ ಉಡಾಫೆ ಮಾತನಾಡುವುದು ಬಿಡಬೇಕು, ಸಾರ್ವಜನಿಕರು ಇನ್ನು ಒಂದು ವಾರ ಹೆಚ್ಚು ಸಹಕರಿಸಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದ್ದಾರೆ.