LATEST NEWS
ಉಡುಪಿ – ಮಧ್ಯರಾತ್ರಿ 12 ಗಂಟೆ ಬದಲು 10 ಗಂಟೆ ಒಳಗೆ ಬಲಿಪೂಜೆ
ಉಡುಪಿ ಡಿಸೆಂಬರ್ 24: ಬ್ರಿಟನ್ ಕೊರೋನಾದ ಆತಂಕದಲ್ಲಿ ರಾಜ್ಯಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಇದರ ನೇರ ಬಿಸಿ ಕ್ರಿಸ್ಮಸ್ ಹಬ್ಬದ ಮೇಲೆ ತಟ್ಟಿದೆ. ಬಹುತೇಕ ಕಡೆಗಳಲ್ಲಿ ರಾತ್ರಿಯ ಮಿಡ್ನೈಟ್ ಮಾಸ್ ನ್ನು ರದ್ದುಗೊಳಿಸಲಾಗಿದೆ.
ಇಂದು ರಾತ್ರಿ 12 ಗಂಟೆಗೆ ಯೇಸು ಸ್ವಾಮಿಯ ಜನನವಾಗುತ್ತದೆ. ಕ್ರೈಸ್ತ ಧರ್ಮೀಯರು ಈ ಸಂದರ್ಭವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ವಿಶ್ವದ ಎಲ್ಲಾ ಚರ್ಚುಗಳಲ್ಲಿ ಮಿಡ್ನೈಟ್ ಮಾಸ್ ಇರುತ್ತದೆ. ಈ ಬಲಿಪೂಜೆಯ ಸಂದರ್ಭ ಬಾಲ ಯೇಸುವಿನ ಜನನವಾಯಿತು ಎಂದ ನಂಬಿಕೆಯಿದೆ. ಈ ಬಾರಿ ಮಿಡ್ನೈಟ್ ಮಾಸ್ ಗೆ ರಾಜ್ಯ ಸರ್ಕಾರದ ಹೊಸ ನಿಯಮ ತಡೆಯೊಡ್ಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಧರ್ಮಪ್ರಾಂತ್ಯ ಪೂಜೆಯ ಅವಧಿಗಳಲ್ಲಿ ಬದಲಾವಣೆ ಮಾಡಿದೆ.
ಮಧ್ಯರಾತ್ರಿ 12 ಗಂಟೆಗೆ ನಡೆಯುವ ಬಲಿಪೂಜೆಯ ಬದಲು ಹತ್ತು ಗಂಟೆಯ ಒಳಗೆ ಎಲ್ಲಾ ಧಾರ್ಮಿಕ ವಿಧಿಗಳನ್ನು ಮುಗಿಸುವಂತೆ ಚರ್ಚೆಗಳಿಗೆ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯಾದ್ಯಂತ ಸಂಜೆ ಆರು ಗಂಟೆಯಿಂದ ಹತ್ತು ಗಂಟೆಯ ಒಳಗೆ ಎಲ್ಲ ಪೂಜೆಗಳು ನೆರವೇರಲಿದೆ ಎಂದು ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಮಾಹಿತಿ ನೀಡಿದ್ದಾರೆ. ಹಬ್ಬದ ಬಳಿಕ ನಡೆಯುವ ಮನೋರಂಜನಾ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳನ್ನು ಉಡುಪಿ ಧರ್ಮ ಪ್ರಾಂತ್ಯ ಕೈಬಿಟ್ಟಿದೆ.