LATEST NEWS
ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು – ಚಾಲಕ ಸಾವು

ಉಡುಪಿ ಜುಲೈ 19: ಭಾರೀ ಮಳೆಯಿಂದಾಗಿ ಕಾರೊಂದು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉಡುಪಿಯ ಉಚ್ಚಿಲ – ಮುದರಂಗಡಿ ರಸ್ತೆಯ ಎಲ್ಲೂರು ಪೆಜತ್ತಕಟ್ಟೆ ಬಳಿ ಇಂದು ನಡೆದಿದೆ.
ಮೃತರನ್ನು ಕಾಪು ಕೊಪ್ಪಲಂಗಡಿ ನಿವಾಸಿ ರವೀಂದ್ರ ಪೂಜಾರಿ (38) ಎಂದು ಗುರುತಿಸಲಾಗಿದೆ. ರವಿಂದ್ರ ಪೂಜಾರಿ ಉದ್ಯಾವರ ಬಲಾಯಿಪಾದೆಯಲ್ಲಿ ಗ್ಯಾರೇಜ್ ನಡೆಸುತ್ತಿದ್ದು ನಿನ್ನೆ ಆದಿತ್ಯವಾರ ರಾತ್ರಿ ಎಲ್ಲೂರಿಗೆ ತೆರಳಿದ್ದರು. ಇಂದು ಮುಂಜಾನೆ ವಾಪಾಸ್ಸಾಗುತ್ತಿರುವ ವೇಳೆ ಅಪಘಾತ ಸಂಭವಿಸಿದೆ.

ಕಾರು ರಸ್ತೆ ಬದಿಯ ಚರಂಡಿ ಮತ್ತು ಮಣ್ಣಿನ ದಿಬ್ಬಕ್ಕೆ ಢಿಕ್ಕಿ ಹೊಡೆದಿದ್ದು, ರವೀಂದ್ರ ಅವರು ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಂಜಾನೆ ಪೇಪರ್ ಹಾಕುವ ಏಂಜಟರು ಇದನ್ನು ಗಮನಿಸಿ, ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಬಳಿಕ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮೃತರು ತಾಯಿ, ಸಹೋದರರು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.