UDUPI
ಉಡುಪಿಯಲ್ಲಿ 45 ಮಂದಿಗೆ ಕೊರೊನಾ .. ಹೋಟೆಲ್ ಸಿಬ್ಬಂದಿಗಳಿಗೆ ಕೊರೊನಾ ಸೊಂಕು ಆತಂಕದಲ್ಲಿ ಸ್ಥಳೀಯರು
ಉಡುಪಿ ಜುಲೈ 05: ಕೊರೊನಾ ಹೊಡೆತಕ್ಕೆ ಉಡುಪಿ ಜಿಲ್ಲೆ ಸಂಪೂರ್ಣ ನಲುಗಿ ಹೋಗಿದ್ದು ಇಂದು ಮತ್ತೆ 45 ಮಂದಿಗೆ ಕೊರೊನಾ ಸೊಂಕು ತಗುಲಿದೆ. ಇದರೊಂದಿಗೆ ಜಿಲ್ಲೆಯ ಕೊರೋನಾ ಪೀಡಿತರ ಸಂಖ್ಯೆ 1322 ಕ್ಕೆ ಏರಿಕೆಯಾಗಿದೆ. ಇಂದು ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಯೋರ್ವರಿಗೆ ಕೊರೊನಾ ದೃಢಪಟ್ಟಿರುವ ಹಿನ್ನಲೆ ಪೊಲೀಸ್ ಠಾಣೆಯನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.
ಇನ್ನು ಬುಧವಾರ ಇಲ್ಲಿನ ಹೋಟೆಲ್‌ವೊಂದರ ಮಾಲೀಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು ರೋಗಿಯನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಿ ಮನೆ, ಹೋಟೆಲ್ ಸೀಲ್‌ಡೌನ್ ಮಾಡಲಾಗಿತ್ತು. ಇದೀಗ ಹೋಟೆಲ್ ಮಾಲೀಕನ ಸಂಪರ್ಕದಲ್ಲಿದ್ದ 5 ಮಂದಿ ಸಿಬಂದಿಗಳಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ ಮತ್ತು ಹೋಟೆಲ್ ಪಕ್ಕದ ದಿನಬಳಕೆಯ ಅಂಗಡಿಯೊಂದರ ಮಾಲೀಕನ ಕುಟುಂಬದ ನಾಲ್ಕು ಮಂದಿಗೆ ಸೋಂಕು ಕಂಡು ಬಂದಿದೆ. ಆದರೆ ಅಂಗಡಿ ಮಾಲೀಕನೂ ಕೂಡ ತಪಾಸಣೆಗೆ ಒಳಗಾಗಿದ್ದು ವರದಿ ನೆಗಿಟಿವ್ ಬಂದಿದೆ.
ಇಂದು ಉಡುಪಿ 22, ಕುಂದಾಪುರ 17, ಕಾರ್ಕಳದ 6 ಜನರಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲಿ ಪ್ರಾಥಮಿಕ ಸಂಪರ್ಕದಿಂದ 19 ಜನರಿಗೆ ಕೊರೋನಾ ಸೊಂಕು ಬಂದಿದೆ. ಅಲ್ಲದೆ ರಾಂಡಮ್ ಪರೀಕ್ಷೆಯಿಂದ ಇಬ್ಬರಿಗೆ ಕೊರೋನಾ ಬಂದಿದೆ.
ಇನ್ನು ಕೋಟದ ಹೋಟೆಲ್‌ಗೆ ಪ್ರತಿದಿನ ನೂರಾರು ಮಂದಿ ಗ್ರಾಹಕರು ಭೇಟಿ ನೀಡುತ್ತಾರೆ ಹೀಗಾಗಿ ಮಾಲೀಕನಿಗೆ ಸೋಂಕು ತಗಲಿದಾಗಲೇ ಸ್ಥಳೀಯರು ಸಾಕಷ್ಟು ಆತಂಕಗೊಂಡಿದ್ದರು. ಇದೀಗ ಸಿಬಂದಿಗಳಿಗೂ ಇರುವುದು ದೃಢವಾಗಿರುವುದರಿಂದ ಮತ್ತಷ್ಟು ಆತಂಕ ಮನೆ ಮಾಡಿದೆ.