LATEST NEWS
ಉಡುಪಿಯ ಖಡಕ್ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೋರ್ಲಪಾಟಿ ವರ್ಗಾವಣೆ

ಉಡುಪಿಯ ಖಡಕ್ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೋರ್ಲಪಾಟಿ ವರ್ಗಾವಣೆ
ಉಡುಪಿ ಅಗಸ್ಟ್ 19: ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ವರ್ಗಾಯಿಸಿ ರಾಜ್ಯ ಸರಕಾರ ಆದೇಶಿಸಿದೆ. ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕೊಲಾರ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಜಗದೀಶ್ ಅವರನ್ನು ನೇಮಕಗೊಳಿಸಿದೆ.
ಕಳೆದ ಫೆಬ್ರವರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿಯಾಗಿ ಹೆಪ್ಸಿಬಾ ಅವರು ನೇಮಕಗೊಂಡಿದ್ದರು, ಜಿಲ್ಲೆಯಲ್ಲಿ ಖಡಕ್ ಜಿಲ್ಲಾಧಿಕಾರಿಯಾಗಿ ಹೆಸರುವಾಸಿಯಾಗಿದ್ದ ಅವರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾತ್ರಿ ವೇಳೆ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ತೆರಳಿ ಚುನಾವಣೆಯ ಬಂದೋಬಸ್ತನ್ನು ಸ್ವತಹ ವೀಕ್ಷಿಸುತ್ತಿದ್ದರು.

ವಾರದಲ್ಲಿ ಒಂದು ದಿನ ಬಸ್ ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಂಚರಿಸುವ ಮೂಲಕ ಪರಿಸರ ಸಂರಕ್ಷಣೆ ಮಹತ್ವ ಹಾಗೂ ವಾಯುಮಾಲಿನ್ಯ ನಿಯಂತ್ರಣಕ್ಕೆ ಮತ್ತು ಸಾರ್ವಜನಿಕ ಸಾರಿಗೆ ಉತ್ತೇಜನಕ್ಕೆ ಮಹತ್ವ ನೀಡಿದ್ದರು.
ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಜಾಗಕ್ಕೆ ಕೋಲಾರ ಜಿಲ್ಲಾ ಪಂಚಾಯತ್ ನ ಸಿಇಓ ಆಗಿದ್ದ ಜಿ. ಜಗದೀಶ್ ಅವರು ನೇಮಕವಾಗಿದ್ದಾರೆ. ಕೋಲಾರ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದರು.
ಉಡುಪಿ ಜಿಲ್ಲಾಧಿಕಾರಿಯಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹೆಫ್ಸಿಬಾ ಅವರನ್ನು ಯಾವ ಹುದ್ದೆಗೆ ಮತ್ತು ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿಲ್ಲ.