Connect with us

DAKSHINA KANNADA

ಸರ್ವರು ಒಂದುಗೊಡಿದರೆ ಸಾಮರಸ್ಯ ಸಾಧ್ಯ- ಕುಂಬ್ರ ದಯಾಕರ ಆಳ್ವ

ಸರ್ವರು ಒಂದುಗೊಡಿದರೆ ಸಾಮರಸ್ಯ ಸಾಧ್ಯ- ಕುಂಬ್ರ ದಯಾಕರ ಆಳ್ವ

ಪುತ್ತೂರು ಅಗಸ್ಟ್ 19: ಜಾತಿ, ಮತ, ಧರ್ಮ ಎಂಬ ಬೇಲಿ ದಾಟಿ ಸರ್ವರು ಸೇರಿ ಹಬ್ಬ ಹರಿದಿನ, ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಾಗ ಸಾಮರಸ್ಯದ ನಿಜವಾದ ಸಾರ ಅನಾವರಣಗೊಳ್ಳುತ್ತದೆ ಎಂದು ಮುಕ್ಕೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಹೇಳಿದರು.

ಮುಕ್ಕೂರು ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ದಶಮಾನೋತ್ಸವ ಹತ್ತರ ಹುತ್ತರಿ ಪ್ರಯುಕ್ತ ರವಿವಾರ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಕೆ.ಎಂ.ಬಿ. ಮಾತನಾಡಿ, ಗಣಪತಿಗೆ ವಿಶೇಷ ಸ್ಥಾನ ಇದ್ದು, ಆತನನ್ನು ಭಜಿಸುವುದರಿಂದ ವಿಘ್ನಗಳೆಲ್ಲಾ ದೂರವಾಗುತ್ತದೆ. ಕಳೆದ ಹತ್ತು ವರ್ಷದಿಂದ ಸದುದ್ದೇಶದ ಭಾವನೆಯಿಂದ ಗಣೇಶೋತ್ಸವದ ಹೆಸರಿನಲ್ಲಿ ಹಮ್ಮಿಕೊಂಡಿರುವ ಕಾರ್ಯ ಚಟುವಟಿಕೆಗಳು ಶ್ಲಾಘನೀಯ. ಹಾಗೆಯೇ ದಶಮಾನೋತ್ಸವದ ಸಮಾರಂಭದ ಯಶಸ್ಸಿಗೂ ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಸಮಿತಿ ಗೌರವಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಕಳೆದ ಹತ್ತು ವರ್ಷದಲ್ಲಿ ಸುಳ್ಯ ತಾಲೂಕಿನಲ್ಲೇ ಒಂದು ಮಾದರಿ ಸಂಘ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಈ ಸಮಿತಿ ಹತ್ತರ ಸಂಭ್ರಮದಲ್ಲಿದೆ. ಇನ್ನಷ್ಟು ಸಮಾಜಮುಖಿ ಚಿಂತೆನೆಯೊಂದಿಗೆ ಮುನ್ನೆಡೆಯಲಿದೆ ಎಂದರು.

ಮುಕ್ಕೂರು ಜ್ಯೋತಿ ಯುವಕ ಮಂಡಲ ಅಧ್ಯಕ್ಷ ನಾರಾಯಣ ಕೊಂಡೆಪ್ಪಾಡಿ ಮಾತನಾಡಿ, ಸಂಘಟನೆಗಳ ಸಂಘಟಿತ ಪ್ರಯತ್ನದಿಂದ ಸಮಾಜಕ್ಕೂ, ಸಂಘಟನೆಗೂ ಗೌರವ ದೊರೆಯುತ್ತದೆ. ಸಂಘಟಿತ ಪ್ರಯತ್ನದ ಮೂಲಕ ಗಣೇಶೋತ್ಸವ ಸಮಿತಿ ಉತ್ತಮ ಚಟುವಟಿಕೆ ಹಮ್ಮಿಕೊಂಡಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕೃಷ್ಣಪ್ಪ ನಾಯ್ಕ ಶುಭ ಹಾರೈಸಿದರು.

ಈ ಸಂದರ್ಭ ಶಾಲಾ ಶಿಕ್ಷಕಿ ಅಮೃತಾ, ಎಸ್‌ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಎನ್.ಕೆ ಉಪಸ್ಥಿತರಿದ್ದರು. ದಶಮಾನೋತ್ಸವ ಸಮಿತಿ ಕೋಶಾಧಿಕಾರಿ ರಮೇಶ್ ಕಾನಾವು ವಂದಿಸಿದರು. ರಕ್ಷಿತಾ ಅಡ್ಯತಕಂಡ ನಿರೂಪಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಗನ್ನಾಥ ಪೂಜಾರಿ ಮುಕ್ಕೂರು ವಹಿಸಿದ್ದರು. ವೇದಿಕೆಯಲ್ಲಿ ಕುಂಬ್ರ ದಯಾಕರ ಆಳ್ವ, ಗ್ರಾ.ಪಂ.ಸದಸ್ಯ ಚನಿಯ ಕುಂಡಡ್ಕ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಗುಡ್ಡಪ್ಪ ಗೌಡ ಅಡ್ಯತಕಂಡ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಅಲೆಕ್ಕಾಡಿ, ಲಿಂಗಪ್ಪ ಬೆಳ್ಳಾರೆ, ಶಶಿಕುಮಾರ್ ಬಿ.ಎನ್., ಪ್ರಜ್ವಲ್ ರೈ ಚೆನ್ನಾವರ, ಇಕ್ಬಾಲ್ ಚೆನ್ನಾವರ, ಶರೀಫ್ ಕುಂಡಡ್ಕ, ರೂಪಾ, ಸರಿತಾ ಮೊದಲಾದವರು ಕರ್ತವ್ಯ ನಿರ್ವಹಿಸಿದರು.

ಇದೇ ಸಂದರ್ಭ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲಾ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು, ಕಾಲೇಜು ವಿಭಾಗದಲ್ಲಿ ಭಾಷಣ, ಪ್ರಬಂಧ ಹಾಗೂ ಪುರುಷರ ವಿಭಾಗದಲ್ಲಿ ಕಬಡ್ಡಿ, ಹಗ್ಗಜಗ್ಗಾಟ, ವಾಲಿಬಾಲ್, ನಿಧಾನಗತಿಯ ಬಕ್ ರೇಸ್, ಮಹಿಳಾ ವಿಭಾಗದಲ್ಲಿ ತ್ರೋಬಾಲ್, ಹಗ್ಗಜಗ್ಗಾಟ, ಮಡಿಕೆ ಒಡೆಯುವುದು, ಸಂಗೀತ ಕುರ್ಚಿ ಸ್ಪರ್ಧೆಗಳು ನಡೆಯಿತು. ನೂರಾರು ಸ್ಪರ್ಧಿಗಳು ಪಾಲ್ಗೊಂಡರು.

Facebook Comments

comments