LATEST NEWS
ಮಂಗಳೂರಿನಲ್ಲೊಂದು ಹಾದಿಯಾ ಲವ್ ಜಿಹಾದ್ ಪ್ರಕರಣ
ಮಂಗಳೂರಿನಲ್ಲೊಂದು ಹಾದಿಯಾ ಲವ್ ಜಿಹಾದ್ ಪ್ರಕರಣ
ಮಂಗಳೂರು ಜನವರಿ 2: ಮಂಗಳೂರಿನಲ್ಲಿ ನಡೆದ ಶಂಕಿತ ಲವ್ ಜಿಹಾದ್ ಪ್ರಕರಣ ಈಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಕಾಸರಗೋಡು ಮೂಲದ ಹಿಂದೂ ಸಂಘಟನೆಯ ಮುಖಂಡರೊಬ್ಬರ ಪುತ್ರಿ ರೇಷ್ಮಾ ಮುಂಬೈ ನ ಇಕ್ಬಾಲ್ ಚೌಧರಿ ಎಂಬವರೊಂದಿಗೆ ಕಾಣೆಯಾಗಿದ್ದು ಇದು ಲವ್ ಜಿಹಾದ್ ಪ್ರಕರಣ ಎಂದು ರೇಷ್ಮಾ ಹೆತ್ತವರು ಆರೋಪಿಸಿದ್ದರು.
ಆದರೆ ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ತನ್ನ ಪತ್ನಿ ರೇಷ್ಮಾಳನ್ನ ಬಲವಂತವಾಗಿ ಆಕೆಯ ಸಂಬಂಧಿಕರು ಅಪಹರಿಸಿಕೊಂಡು ಹೋಗಿದ್ದಾರೆ, ಹೀಗಾಗಿ ಅವಳನ್ನ ಪತ್ತೆ ಮಾಡಿ ಕೊಡಿ ಎಂದು ಇಕ್ಬಾಲ್ ಚೌಧರಿ ಮುಂಬೈ ಹೈ ಕೋರ್ಟ್ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾನೆ.
ಕಳೆದ ಡಿಸೆಂಬರ್ 17ರ ಭಾನುವಾರ ನಾನು ಮತ್ತು ಪತ್ನಿ ರೇಷ್ಮಾ ಮುಂಬೈನ ವಾಶಿ ಎಂಬಲ್ಲಿನ ರಘಲೀಲಾ ಮಾಲ್ ಬಳಿ ನಡೆದುಕೊಂಡು ಬರ್ತಿದ್ದ ವೇಳೆ ತನ್ನ ಪತ್ನಿಯನ್ನ ಅವಳ ಸಂಬಂಧಿಕರು ಅಪಹರಿಸಿದ್ದಾರೆ ಎಂದು ಹೆಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಪತ್ನಿಯ ಪತ್ತೆಗೆ ಮನವಿ ಮಾಡಿದ್ದಾನೆ.
ಅದರಂತೆ ಮುಂಬೈ ಹೈ ಕೋರ್ಟ್ ಒಂದು ವಾರದೊಳಗೆ ರೇಷ್ಮಾಳನ್ನ ಪತ್ತೆ ಮಾಡಿ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ಮುಂಬೈ ಪೊಲೀಸ್ ಆಯುಕ್ತರಿಗೆ ಆದೇಶ ನೀಡಿದೆ. ಹೀಗಾಗಿ ಮುಂಬೈ ಪೊಲೀಸರು ಮಂಗಳೂರಿಗೆ ಆಗಮಿಸಿದ್ದು, ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿಯೇ ಮುಂಬೈ ಪೊಲೀಸರು ಬೀಡು ಬಿಟ್ಟಿದ್ದಾರೆ.
ಮಂಗಳೂರಿನಲ್ಲಿರುವ ರೇಷ್ಮಾಳ ಮನೆ ಸೇರಿದಂತೆ ಸಂಬಂಧಿಕರಲ್ಲಿ ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೆ ರೇಷ್ಮಾಳ ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ರೇಷ್ಮಾಳ ಪತಿ ಇಕ್ಬಾಲ್ ಒಬ್ಬ ಸೇಲ್ಸ್ ಮೆನ್ ಆಗಿದ್ದು, ಮುಂಬೈ ಸ್ಲಮ್ ಏರಿಯಾದಲ್ಲಿ ವಾಸವಾಗಿದ್ದಾನೆ ಎಂದು ಹೇಳಲಾಗಿದೆ.
ಆದರೆ ರೇಷ್ಮಾ ಮಾತ್ರ ತನ್ನನ್ನ ಯಾರೂ ಅಪಹರಿಸಿಲ್ಲ, ನನ್ನ ಇಚ್ಚೆಯನುಸಾರವೇ ತಂದೆ-ತಾಯಿಯ ಜೊತೆಗೆ ಬಂದಿದ್ದೇನೆ ಎಂದು ಅಫಿಡವಿಟ್ ಸಲ್ಲಿಸಿದ್ದಳು. ಈ ಪ್ರತಿಯನ್ನ ಮುಂಬೈ ಪೊಲೀಸರಿಗೆ ಸಲ್ಲಿಸಲು ರೇಷ್ಮಾ ಪೋಷಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ನಡುವೆ ಮಂಗಳೂರು ತ್ಯಜಿಸಿರೋ ರೇಷ್ಮಾ ಕುಟುಂಬ ಕೇರಳದ ಗುಪ್ತ ಜಾಗವೊಂದರಲ್ಲಿ ಮಗಳ ಜೊತೆಗೆ ವಾಸ್ತವ್ಯ ಹೂಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ರೇಷ್ಮಾ ಮತ್ತು ಇಕ್ಬಾಲ್ ಪ್ರೇಮಪ್ರಕರಣವನ್ನು ಹಿಂದೂ ಸಂಘಟನೆಗಳು ಲವ್ ಜಿಹಾದ್ ಎಂದು ಆರೋಪಿಸಿದ್ದರು. ಅಲ್ಲದೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಪ್ರಕರಣವನ್ನು ಎನ್ ಐಎಗೆ ವಹಿಸಲು ಮನವಿಯನ್ನು ಸಲ್ಲಿಸಿದ್ದರು.
ಈ ಪ್ರಕರಣ ಇನ್ನೊಂದು ಹಾದಿಯಾ ಪ್ರಕರಣ ಆಗಬಹುದೇ ಎಂಬುದು ಕಾದು ನೋಡಬೇಕಿದೆ.