Connect with us

    LATEST NEWS

    ಜಾತಕ ದೋಷ ನಿವಾರಿಸಲು ತನ್ನ13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ..!

    ಜಲಂಧರ್, ಮಾರ್ಚ್ 19: ಜಾತಕದಲ್ಲಿನ ‘ಮಂಗಲಿಕ್ ದೋಷ’ ನಿವಾರಣೆಗಾಗಿ ಶಿಕ್ಷಕಿಯೊಬ್ಬಳು ತನ್ನ 13 ವರ್ಷದ ಟ್ಯೂಷನ್ ವಿದ್ಯಾರ್ಥಿಯನ್ನು ಬಲವಂತವಾಗಿ ಮದುವೆಯಾದ ಘಟನೆ ಪಂಜಾಬಿನ ಜಲಂಧರ್ ನಿಂದ ವರದಿಯಾಗಿದೆ.

    ಪಂಜಾಬಿನ ಜಲಂಧರ್ ನಗರದ ಬಸ್ತಿ ಬಾವ ಖೇಲ್ ನಿವಾಸಿಯಾದ ಶಿಕ್ಷಕಿಯೊಬ್ಬರು ಮದುವೆ ಆಗದಿರುವ ಬಗ್ಗೆ ತಲೆ ಕೆಡಿಸಿಕೊಂಡಿದ್ದರಂತೆ. ಇದಕ್ಕೆ ಜಾತಕದಲ್ಲಿರುವ ಮಂಗಲಿಕ್ ದೋಷ ಕಾರಣವಾಗಿದ್ದು, ಅದರ ನಿವಾರಣೆಗೆ ಅಪ್ರಾಪ್ತ ವಯಸ್ಸಿನ ಹುಡುಗನೊಂದಿಗೆ ಸಾಂಕೇತಿಕ ವಿವಾಹ ಮಾಡಿಕೊಳ್ಳಬೇಕು ಎಂದು  ಜ್ಯೋತಿಷಿಯೊಬ್ಬರು ಸಲಹೆ ನೀಡಿದ್ದರಂತೆ. ಇದಕ್ಕಾಗಿ ಈಕೆ ತಾನು ಟ್ಯೂಷನ್ ಮಾಡುತ್ತಿದ್ದ 13 ವರ್ಷದ ವಿದ್ಯಾರ್ಥಿಯನ್ನೆ ವರನನ್ನಾಗಿ ಆಯ್ದುಕೊಂಡ ಶಿಕ್ಷಕಿ, ಹುಡುಗನ ಪಾಲಕರ ಬಳಿ ತರಗತಿಗಳಿಗಾಗಿ ತನ್ನ ಮನೆಯಲ್ಲೇ ಆತ ಒಂದು ವಾರ ತಂಗಲು ಅನುಮತಿ ಪಡೆದಳು.

    ನಂತರ ಶಿಕ್ಷಕಿ ಮತ್ತು ಅವಳ ಕುಟುಂಬದವರು ಬಲವಂತವಾಗಿ ಹಲದಿ-ಮೆಹೆಂದಿ, ಸಾತ್ ಫೇರೆ ಮತ್ತು ಸುಹಾಗ್​ರಾತ್ ಸಮಾರಂಭಗಳೊಂದಿಗೆ ಮದುವೆ ಶಾಸ್ತ್ರವನ್ನು ನಡೆಸಿದ್ದಾರೆ. ಮತ್ತೆರಡು ದಿನದ ನಂತರ ಶಿಕ್ಷಕಿಯನ್ನು ವಿಧವೆಯೆಂದು ಘೋಷಿಸಿ ಬಳೆ ಒಡೆಸುವ ಶಾಸ್ತ್ರ ಮಾಡಿದ್ದಾರೆ ಎನ್ನಲಾಗಿದೆ.

    ಹುಡುಗನು ಮನೆಗೆ ವಾಪಸಾದಾಗ ಈ ಬಗ್ಗೆ ತಿಳಿಸಿ, ಶಿಕ್ಷಕಿಯ ಮನೆಯಲ್ಲಿ ಕೂಡಿಟ್ಟು ತನ್ನಿಂದ ಮನೆಗೆಲಸವನ್ನೂ ಮಾಡಿಸಿದ್ದಾಗಿ ಪಾಲಕರಿಗೆ ತಿಳಿಸಿದ್ದಾನೆ. ತಕ್ಷಣ ಬಸ್ತಿ ಬಾವ ಠಾಣೆಯಲ್ಲಿ ದೂರು ನೀಡಿದ ಪಾಲಕರು ಶಿಕ್ಷಕಿಯ ಮೇಲೆ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ.

    ಆದರೆ ಆ ನಂತರ ಶಿಕ್ಷಕಿ ಮತ್ತು ಪಾಲಕರ ನಡುವೆ ರಾಜಿ ಸಂಧಾನವಾಯಿತಾದ್ದರಿಂದ ದೂರನ್ನು ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ. ಅಪ್ರಾಪ್ತ ವಯಸ್ಕನಿಗೆ ಸಂಬಂಧಿಸಿದ ಈ ಆರೋಪವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಆದೇಶಿಸಲಾಗಿದೆ ಎಂದು ಡಿಎಸ್ಪಿ ಗುರ್​ಮೀತ್ ಸಿಂಗ್ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply