LATEST NEWS
ಫುಟ್ಪಾತ್ ಮೇಲೆ ಹಗಲು-ರಾತ್ರಿ ಕಳೆಯುತ್ತಿರುವ ದೇಶ ಸೇವೆ ಕನಸು ಹೊತ್ತ ಬಂದ ಭವಿಷ್ಯದ ಸೈನಿಕರು
ಉಡುಪಿ ಮಾರ್ಚ್ 19: ದೇಶ ಸೇವೆಗೆ ಸೈನ್ಯಕ್ಕೆ ಸೇರಲು ಆಗಮಿಸಿದ ಯುವಕರಿಗೆ ಮೂಲಭೂತ ಸೌಕರ್ಯ ಒದಗಿಸಲು ಉಡುಪಿ ಜಿಲ್ಲಾಡಳಿತ ವಿಫಲವಾಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಮುಂದೆ ದೇಶ ಸೇವೆ ಮಾಡುವ ಕನಸು ಹೊತ್ತ ಯುವಕರು ರಸ್ತೆ ಬದಿಯಲ್ಲಿ ರಾತ್ರಿ ಕಳೆಯುವ ಸ್ಥಿತಿ ಬಂದೊದಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸೇನಾ ನೇಮಕಾತಿ ನಡೆಯುತ್ತಿದೆ. ಜಿಲ್ಲಾ ಸರಕಾರಿ ಅಜ್ಜರಕಾಡು ಮೈದಾನದಲ್ಲಿ ನಡೆಯುವ ಈ ಪ್ರಕ್ರಿಯೆಯಲ್ಲಿ ಪ್ರತಿದಿನ ಮೂರು ಸಾವಿರಕ್ಕಿಂತಲೂ ಹೆಚ್ಚು ಯುವಕರು ಪಾಲ್ಗೊಳ್ಳುತ್ತಿದ್ದಾರೆ. ಆಯ್ಕೆ ಪ್ರಕ್ರಿಯೆಗೆ ಬರುವ ಹೊರಜಿಲ್ಲೆಯ ಯುವಕರಿಗೆ ಮೂಲಭೂತ ಸೌಕರ್ಯದ ಕೊರತೆ ಎದ್ದುಕಾಣುತ್ತಿದೆ.
ಭವಿಷ್ಯದ ಸೈನಿಕರು ರಾತ್ರಿ ರಸ್ತೆಬದಿ ಮಲಗಿ ಕತ್ತಲು ಕಳೆಯುತ್ತಿದ್ದಾರೆ. ಒಂದು ದಿನ ಮೊದಲೇ ಉಡುಪಿಗೆ ಬರುವ ಯುವಕರು ಪಾರ್ಕು ರಸ್ತೆಬದಿ, ಫುಟ್ಪಾತ್ ಮೇಲೆ ಹಗಲು-ರಾತ್ರಿ ಕಳೆಯುತ್ತಿದ್ದಾರೆ. ರಾತ್ರಿ ರಸ್ತೆ ಬಳಿ ಮಲಗುವ, ಬೆಳಗಿನ ಜಾವ ಬಿರುಬಿಸಿಲಿಗೆ ಒದ್ದಾಡುವ ಯುವಕರನ್ನು ಕಂಡು ಜನ ಉಡುಪಿ ಜಿಲ್ಲಾಡಳಿತದ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ನಡೆಯುವ ಸೇನಾ ನೇಮಕಾತಿ ಪ್ರಕ್ರಿಯೆಗೆ ಯಾವುದೇ ರಾಜಕೀಯ ಪಕ್ಷಗಳು ಸಂಘಟನೆಗಳು ಮೂಲಭೂತ ಸೌಕರ್ಯವನ್ನು ಮಾಡಿಲ್ಲ. ಮಾತೆತ್ತಿದರೆ ದೇಶ, ಸೈನಿಕರು ಎಂದು ಉದ್ದುದ್ದ ಭಾಷಣ ಬಿಗಿಯುವವರೂ ಎಲ್ಲವನ್ನೂ ನೋಡಿಯೋ ನೋಡದೆಯೋ ಸುಮ್ಮನಿದ್ದಾರೆ.
ಮೈದಾನದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದೇವೆ ಊಟದ ವ್ಯವಸ್ಥೆ ಸಾಂಗವಾಗಿ ನಡೆಯುತ್ತಿದೆ ಮೂರು ಕಡೆ ವಸತಿ ವ್ಯವಸ್ಥೆ ಮಾಡಿದ್ದೇವೆ. ನಿಗದಿಯಾದ ದಿನಕ್ಕಿಂತ ಮೊದಲೇ ಯುವಕರು ಬರುತ್ತಿರುವುದರಿಂದ ಈ ಸಮಸ್ಯೆ ಆಗಿರಬಹುದು ಎಂದು ಜಿಲ್ಲಾಡಳಿತ ಹೇಳಿದೆ.
ಧಾರ್ಮಿಕ, ಸಾರ್ವಜನಿಕ, ರಾಜಕೀಯ ಕಾರ್ಯಕ್ರಮಗಳನ್ನು ಉಡುಪಿಯಲ್ಲಿ ವ್ಯವಸ್ಥಿತವಾಗಿ ನಡೆಸಲಾಗುತ್ತದೆ. ಆದರೆ ಭವಿಷ್ಯದ ಸೈನಿಕರ ವಿಚಾರದಲ್ಲಿ ಸ್ವಯಂಪ್ರೇರಿತವಾಗಿಯೂ ಜನ ಮುಂದೆ ಬಂದಿಲ್ಲ. ಜಿಲ್ಲಾಡಳಿತ ಕರ್ತವ್ಯದ ರೀತಿಯಲ್ಲಿ ಕೆಲಸ ಮಾಡಿ ಕೈತೊಳೆದುಕೊಂಡಿದೆ ಎಂದು ಸಾಮಾಜಿಕ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.