DAKSHINA KANNADA
ಚಲಿಸುತ್ತಿದ್ದ ಪ್ಯಾಸೆಂಜರ್ ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು….!!

ಪುತ್ತೂರು ಅಕ್ಟೋಬರ್ 17: ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಪ್ಯಾಸೆಂಜರ್ ರೈಲಿನಡಿಗೆ ನೇರಳಟ್ಟೆ ಸಮೀಪ ವ್ಯಕ್ತಿಯೊಬ್ಬರು ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆಯೇ ಸಾವನಪ್ಪಿರುವ ಘಟನೆ ಅಕ್ಟೋಬರ್ 16 ರಂದು ನಡೆದಿದೆ.
ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ರೈಲು ನೇರಳಕಟ್ಟೆ ಸಮೀಪ ನಿಧಾನವಾಗಿ ಚಲಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ರೈಲ್ವೇ ಹಳಿಗೆ ಆಕಸ್ಮೀಕವಾಗಿ ಬಂದು ರೈಲಿನಡಿಗೆ ಬಿದ್ದಿದ್ದರು. ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ರೈಲಿನ ಪೈಲೆಟ್ ಚಲಿಸುತ್ತಿರುವ ರೈಲನ್ನು ನಿಲ್ಲಿಸಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆ ತಂದಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆ ನಡೆದ ಸಂದರ್ಭ ರೈಲ್ವೇ ಪೈಲೆಟ್ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ನೀಡಿದ ಮಾಹಿತಿಯಂತೆ ಪುತ್ತೂರು ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಬಂದಿತ್ತಾದರೂ ವ್ಯಕ್ತಿ ಆಗಲೇ ಮೃತಪಟ್ಟಿದ್ದಾರೆ.
