LATEST NEWS
ಟ್ರಾಫಿಕ್ ನಿಯಮ ಮುರಿದ ಜನಸಾಮಾನ್ಯನಿಗೆ ದಂಡ, ಜನಪ್ರತಿನಿಧಿಗೆ ಮಾತ್ರ ಉದ್ಧಂಡ, ಇದು ಉಡುಪಿ ಪೋಲೀಸ್ ಅಜೆಂಡಾ !
ಟ್ರಾಫಿಕ್ ನಿಯಮ ಮುರಿದ ಜನಸಾಮಾನ್ಯನಿಗೆ ದಂಡ, ಜನಪ್ರತಿನಿಧಿಗೆ ಮಾತ್ರ ಉದ್ಧಂಡ, ಇದು ಉಡುಪಿ ಪೋಲೀಸ್ ಅಜೆಂಡಾ !
ಮಂಗಳೂರು ಸೆಪ್ಟೆಂಬರ್ 10: ಜನಸಾಮಾನ್ಯರಿಂದ 3 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿದ್ದ ಉಡುಪಿ ಪೊಲೀಸರಿಗೆ ಬಿಜೆಪಿ ನಾಯಕರು ಬಹಿರಂಗವಾಗಿ ಸಂಚಾರ ನಿಯಮವನ್ನು ಮುರಿದಿದ್ದು ಕಣ್ಣಿಗೆ ಕಾಣಿಸದೇ, ಜನ ಸಾಮಾನ್ಯರಿಗೊಂದು ನ್ಯಾಯ ನಮ್ಮನ್ನಾಳುವ ನಾಯಕರಿಗೊಂದು ನ್ಯಾಯ ಎಂಬ ಪರಿಸ್ಥಿತಿ ಉಡುಪಿಯಲ್ಲಿ ನಿರ್ಮಾಣವಾಗಿದೆ.
ಕೇಂದ್ರ ಸರಕಾರ 2019ರ ಮೋಟಾರ ವಾಹನ ತಿದ್ದುಪಡಿ ಕಾಯ್ದೆ ತಿದ್ದುಪಡಿ ನಂತರ ದೇಶದಾದ್ಯಂತ ಪೊಲೀಸರು ಸಂಚಾರ ನಿಯಮ ಮೀರಿದವರ ಮೇಲೆ ದಂಡ ವಿಧಿಸುತ್ತಿದ್ದಾರೆ.ಹೆಚ್ಚಾಗಿ ಮಧ್ಯಮ ವರ್ಗವನ್ನು ಗುರಿಯಾಗಿಸಿ ಪೊಲೀಸರು ದಂಡ ಬೀಸುತ್ತಿದ್ದಾರೆ ಎನ್ನುವುದು ಇಂದು ನಡೆದ ಪ್ರಕರಣದಲ್ಲಿ ಸಾಭೀತಾಗಿದೆ.
ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಉಡುಪಿಯಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಉಡುಪಿಗೆ ಬರುತ್ತಾ ನಳೀನ್ ಅವರು ಸೀಟ್ ಬೆಲ್ಟ್ ಹಾಕಿರಲಿಲ್ಲ. ಸೀಟ್ ಬೆಲ್ಟ್ ಹಾಕದೆಯೇ ನಳೀನ್ ಕುಮಾರ್ ಮಂಗಳೂರಿನಿಂದ ಉಡುಪಿಗೆ ಪ್ರಯಾಣಿಸಿದ್ದಾರೆ.
ಸರ್ಕಾರದ ಮುಖ್ಯ ಸಚೇತಕ ಶಾಸಕ ಸುನೀಲ್ ಕುಮಾರ್ ಅವರು ಕೂಡ ನಿಯಮ ಉಲ್ಲಂಘಿಸಿದ್ದಾರೆ. ಇವರಿಬ್ಬರೂ ಕಣ್ಮುಂದೆಯೇ ಕಾರಿಂದ ಇಳಿದರೂ ಟ್ರಾಫಿಕ್ ಪೊಲೀಸರು ದಂಡ ಹಾಕಿಲ್ಲ. ಅಷ್ಟೇ ಅಲ್ಲದೆ ಉಡುಪಿಯ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು.
ಈ ಜೀಪಿನ ಚಾಲಕ ಸೀಟ್ ಬೆಲ್ಟ್ ಹಾಕದೆ ಮೂರ್ನಾಲ್ಕು ಕಿ.ಮೀ ವಾಹನ ಚಲಾಯಿಸಿದ್ದಾನೆ. ನಗರದಾದ್ಯಂತ ತೆರೆದ ವಾಹನ ಸಂಚರಿಸುವಾಗ ಪೊಲೀಸರು ಜೀಪಿಗೆ ರಕ್ಷಣೆ ನೀಡಿದರೆ ವಿನಾಃ ಆ ಚಾಲಕನಿಗೆ ದಂಡ ಹಾಕಲಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರೆ ಟ್ರಾಫಿಕ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರೂ ಕೂಡ, ಅವರದೇ ಪಕ್ಷದ ಯುವ ಮುಖಂಡರು ಮಾತ್ರ ಕಾನೂನು ಮುರಿಯುವುದರಲ್ಲಿ ನಿರತರಾಗಿದ್ದಾರೆ. ಕಾನೂನು ರೂಪಿಸುವ ಜನಪ್ರತಿನಿಧಿಗಳೇ ಈ ರೀತಿ ಕಾನೂನು ಮುರಿದಲ್ಲಿ ಕಾನೂನು ಕೇವಲ ಮಧ್ಯಮ ವರ್ಗದವರಿಗೆ ಮಾತ್ರವೇ ಎನ್ನುವುದು ಸಾರ್ವಜನಿಕರ ಪ್ರಶ್ನೆ ಯಾಗಿದೆ.
ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ದೇಶದಲ್ಲೆಡೆ ದಂಡ ವಿಧಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. 80 ಸಾವಿರದವರೆಗೂ ದಂಡ ವಿಧಿಸಿರುವ ಉದಾಹರಣೆಗಳಿವೆ. ಈ ಹೊಸ ನಿಯಮದಿಂದ ಸಂಚಾರಿ ನಿಯಮ ಉಲ್ಲಂಘಿಸುವವರ ಜೇಬಿಗೆ ಭಾರೀ ಪ್ರಮಾಣದಲ್ಲಿ ಕತ್ತರಿ ಬೀಳುತ್ತಿದ್ದು, ನಿಯಮ ಜಾರಿಗೆ ಬಂದ ಕೆಲವೇ ದಿನಗಳಲ್ಲಿ ಸಂಚಾರಿ ಪೊಲೀಸರು ಒಂದೇ ದಿನದಲ್ಲಿ ಲಕ್ಷಾಂತರ ರೂ. ದಂಡವನ್ನು ಸಂಗ್ರಹಿಸುತ್ತಿದ್ದಾರೆ.