ನಂಬರ್ ಪ್ಲೇಟ್ ರಹಿತ ವಾಹನಗಳ ಮೇಲೆ ಪೊಲೀಸರು ಕಣ್ಣು, ರಸ್ತೆಗಳಿಯದೇ ಶೋರೂಂನಲ್ಲೇ ಇರುವ ಹೊಸ ವಾಹನಗಳು

ಮಂಗಳೂರು ಸೆಪ್ಟೆಂಬರ್ 11: ಮಂಗಳೂರು ನಗರ ಪೊಲೀಸರು ನಂಬರ್ ಪ್ಲೇಟ್ ರಹಿತ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುವ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಹೊಸ ಬೈಕ್ , ಕಾರು ಖರೀದಿ ಮಾಡಿದವರು ವಾಹನವನ್ನು ರಸ್ತೆಗಳಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸದಾಗಿ ಖರೀದಿ ಮಾಡಿರುವ ಹೊಸ ಬೈಕ್ ಗಳು ಬೈಕ್ ನ ಶೊರೂಂನಲ್ಲೇ ಇಟ್ಟು ನೊಂದಣಿ ನಂಬರ್ ಗಾಗಿ ಕಾಯುವ ಪರಿಸ್ಥಿತಿ ಮಂಗಳೂರಿನಲ್ಲಿ ನಿರ್ಮಾಣವಾಗಿದೆ.

ಮಂಗಳೂರಿನಲ್ಲಿ ನಂಬರ್ ಪ್ಲೇಟ್ ಇಲ್ಲದೆ ಸಾಕಷ್ಟು ವಾಹನಗಳು ಓಡಾಟ ನಡೆಸುತ್ತಿದ್ದು, ಇಂತಹ ವಾಹನಗಳನ್ನು ಗಾಂಜಾ ಸಾಗಾಟ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಂಬರ್ ಪ್ಲೇಟ್ ಇಲ್ಲದ 100 ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಾಹನ ಸವಾರರು ನಂಬರ್ ಪ್ಲೇಟ್ ಸಹಿತ ಸಂಚರಿಸಲು ಮಂಗಳೂರರು ಪೊಲೀಸ್ ಆಯುಕ್ತರು ಸೂಚನೆಯನ್ನು ಕೂಡ ನೀಡಿದ್ದು, ಸಂಚಾರಿ ಕಾನೂನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ಈ ವಿಶೇಷ ಕಾರ್ಯಾಚರಣೆ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರವಾಹನಗಳು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಹೊಸದಾಗಿ ವಾಹನ ಖರೀದಿಸಿದ ಜನರು ತಮ್ಮ ವಾಹನ ರಸ್ತೆಗಳಿಯಲು ಹಿಂದೆಮುಂದೆ ನೋಡುವಂತಾಗಿದೆ.

ದ್ವಿಚಕ್ರ ವಾಹನ ಶೋರೂಂನಲ್ಲಿ ವಾಹನ ಖರೀದಿಸಿದ ನಂತರ ಗ್ರಾಹಕ ವಾಹನ ನೊಂದಣಿ ನಂಬರ್ ಪ್ಲೇಟ್ ಇಲ್ಲದೆ ರಸ್ತೆಗಳಿಯಲು ಹಿಂದೇಟು ಹಾಕುತ್ತಿದ್ದು, ಎಲ್ಲಿ ಪೊಲೀಸರು ವಾಹನ ವಶಕ್ಕೆ ಪಡೆಯುತ್ತಾರೆ ಎಂಬ ಹೆದರಿಕೆಯಲ್ಲಿ ಖರೀದಿ ಮಾಡಿದ ದ್ವಿಚಕ್ರವಾಹನವನ್ನು ಶೋರೂಂನಲ್ಲೇ ಇಟ್ಟು ಬರುತ್ತಿದ್ದಾರೆ.

ಸುಪ್ರೀಂಕೋರ್ಟ್ ನ ಆದೇಶದಂತೆ ವಾಹನ ಮಾರಾಟಗಾರರು ವಾಹನ ಮಾರಾಟ ಮಾಡುವಾಗ ವಿಶೇಷ ಭದ್ರತೆಯುಳ್ಳ ನಂಬರ್ ಪ್ಲೇಟ್ ಆಳವಡಿಸಿ ಗ್ರಾಹಕನಿಗೆ ನೀಡಬೇಕೆಂಬ ಆದೇಶ ಇದೆ. ಈ ಹಿನ್ನಲೆಯಲ್ಲಿ , ವಾಹನ ಮಾರಾಟಗಾರರು ಆರ್ ಟಿಓ ದಿಂದ ವಾಹನ ನೊಂದಣಿ ಮಾಡಿಸಿ ನಂಬರ್ ಬರುವವರೆಗೆ ವಾಹನಗಳನ್ನು ತಮ್ಮಲ್ಲೆ ಇಟ್ಟುಕೊಳ್ಳುತ್ತಿದ್ದಾರೆ.

ಖರೀದಿ ಮಾಡಿದ ಗ್ರಾಹಕನಿಗೂ ಆರ್ ಟಿಓ ದಿಂದ ನೊಂದಣಿ ನಂಬರ್ ಬರುವವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾತ್ಕಾಲಿಕ ನೊಂದಣಿ ಇದ್ದರೂ ಕೂಡ ಸವಾರರು ವಾಹನವನ್ನು ರಸ್ತೆಗಳಿಸಲು ಭಯಪಡುತ್ತಿದ್ದು, ಈ ಹಿನ್ನಲೆಯಲ್ಲಿ ಸೇಲ್ ಆದ ಎಲ್ಲಾ ವಾಹನಗಳನ್ನು ತಮ್ಮಲ್ಲೆ ಇಟ್ಟುಕೊಳ್ಳುತ್ತಿದ್ದೇವೆ ಎಂದು ದ್ವಿಚಕ್ರವಾಹನ ಶೋರೂಂ ನವರು ತಿಳಿಸಿದ್ದಾರೆ. ಆರ್ ಟಿಓ ದಿಂದ ನೊಂದಣಿ ಸಂಖ್ಯೆ ಬಂದ ನಂತರ ಗ್ರಾಹಕರಿಗೆ ವಾಹನವನ್ನು ನೀಡಲಾಗುತ್ತಿದೆ.

Facebook Comments

comments