Connect with us

    KARNATAKA

    ಟ್ರಾಫಿಕ್ ನಲ್ಲಿ ಖತರ್ನಾಕ್ ಕಳ್ಳನನ್ನು ಹಿಡಿದ ಪೊಲೀಸ್ – ಸಿನಿಮೀಯಾ ಸ್ಟೈಲ್ ಆಕ್ಷನ್ ವಿಡಿಯೋ ವೈರಲ್

    ತುಮಕೂರು ಅಗಸ್ಟ್ 08: 32 ಕ್ಕೂ ಅಧಿಕ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಖತರ್ನಾಕ್ ಖದೀಮನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಅರೆಸ್ಟ್ ಮಾಡಿದ್ದಾರೆ.


    ಮಂಜೇಶ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಕಳ್ಳನನ್ನು ಪತ್ತೆ ಹಚ್ಚಿ ಬಂಧಿಸುವ ವೇಳೆ ಸಾಹಸ ತೋರಿದ ಪೊಲೀಸ್ ಕಾನ್ಸ್​ಟೇಬಲ್ ದೊಡ್ಡಲಿಂಗಯ್ಯ ಸಾಹಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚೆಗೆ ನಡೆದ ಕಳ್ಳತನವೊಂದರಲ್ಲಿ ಬೇಕಾಗಿದ್ದ ಆರೋಪಿ ಪತ್ತೆಗೆ  ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿತ್ತು. ಜೊತೆಗೆ, ವಾಹನ ಸಂಚಾರದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಆರೋಪಿಯು ತುಮಕೂರು ನಗರದಲ್ಲಿ ಸಂಚರಿಸಿ, ನಂತರ ದಾಬಸ್‌ಪೇಟೆ, ನೆಲಮಂಗಲ ಮೂಲಕ ಬೆಂಗಳೂರು ತಲುಪಿರುವುದು ಗೊತ್ತಾಗಿತ್ತು.

    ಆಗಸ್ಟ್ 6ರಂದು ಆರೋಪಿ ಮಂಜೇಶ್ ಸದಾಶಿವನಗರ ಟ್ರಾಫಿಕ್ ಜಂಕ್ಷನ್ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಇದರಿಂದ ಎಚ್ಚೆತ್ತ ಕಾನ್ಸ್​ಟೇಬಲ್​ ದೊಡ್ಡಲಿಂಗಯ್ಯ ಆರೋಪಿಯನ್ನು ಬೈಕ್​ ಸಮೇತ ಅಡ್ಡಗಟ್ಟಿದ್ದಾರೆ. ಈ ವೇಳೆ ಆರೋಪಿ ಗಾಡಿ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ.

     

    ಈ ವೇಳೆ ಸಿನಿಮೀಯ ರೀತಿಯಲ್ಲಿ ಆರೋಪಿಯ ಕಾಲನ್ನು ಬಿಗಿಯಾಗಿ ಹಿಡಿದುಕೊಂಡು, ಸುಮಾರು 20 ಮೀಟರ್ ದೂರ ಎಳೆದೊಯ್ದರೂ ಬಿಡದ ಕಾನ್ಸ್​ಟೇಬಲ್​ ದೊಡ್ಡಲಿಂಗಯ್ಯ, ಆತನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲೇ ಇದ್ದ ಸದಾಶಿವನಗರ ಟ್ರಾಫಿಕ್‌ ಠಾಣಾ ಮಹಿಳಾ ಎಎಸ್‌ಐ ನಾಗಮ್ಮ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಶ್ರೀಧರ್ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


    ಆರೋಪಿಯಿಂದ ಒಟ್ಟು 10 ಸಾವಿರ ರೂ. ನಗದು, ಹಾಗೂ 6.75 ಲಕ್ಷ ರೂ. ಬೆಲೆಬಾಳುವ 135 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನೆಕಳ್ಳತನದ ಜೊತೆಗೆ, ಮಂಜೇಶ್ ಒಬ್ಬನೆ ದ್ವಿಚಕ್ರ ವಾಹನದಲ್ಲಿ ಬಂದು, ವೃದ್ಧೆಯರಿಗೆ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್​ಗಳಲ್ಲಿ ವೃದ್ಧಾಪ್ಯ ವೇತನ ಮತ್ತು ಪೆನ್ಸನ್​ ಕೊಡಿಸುವುದಾಗಿ ನಂಬಿಸುತ್ತಿದ್ದ. ಬಳಿಕ ಅವರ ಆಧಾರ್ ಕಾರ್ಡ್​, ರೇಷನ್ ಕಾರ್ಡ್​ ಇತ್ಯಾದಿ ದಾಖಲಾತಿಗಳನ್ನು ಕೇಳಿ, ಜೆರಾಕ್ಸ್ ಮಾಡಿಕೊಂಡು ಬರಲು ತನ್ನದೇ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ. ತದನಂತರ, ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್‌ಗಳಲ್ಲಿ ಮೈಮೇಲಿನ ಒಡವೆಗಳನ್ನು ನೋಡಿದರೆ ವೃದ್ಧಾಪ್ಯ ವೇತನ ಮತ್ತು ಪೆನ್ಸನ್ ಕೊಡುವುದಿಲ್ಲ ಎಂದು ಹೇಳಿ, ಅವರ ಮೈಮೇಲಿನ ಆಭರಣಗಳನ್ನು ಬಿಚ್ಚಿಸಿಕೊಂಡು, ಇಲ್ಲವೇ ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.

    ಕಳ್ಳತನ ಹಾಗೂ ಕದ್ದ ಆಭರಣ ಮಾರಾಟ ಮಾಡಿ ಬಂದ ಹಣದಿಂದ ಮಂಜೇಶ್ ಗೋವಾ, ಮಂಗಳೂರು ಕಡೆಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದ. ಜಿಲ್ಲೆಯ ಕೊರಟಗೆರೆ, ಮಧುಗಿರಿ, ಕೋಳಾಲ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಮೈಸೂರು ನಗರ ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ ಆರೋಪಿಯ ವಿರುದ್ಧ 32 ಪ್ರಕರಣ ದಾಖಲಾಗಿವೆ.

    ಇದನ್ನೂ ಓದಿ…..

    ಪತ್ರಿಕಾಗೋಷ್ಠಿ ಕರೆದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷಮೆ ಯಾಚಿಸಿದರೆ ಪ್ರಕರಣ ಕೈಬಿಡಲಾಗುವುದು -ತಮಿಳುನಾಡು ಸರಕಾರ

    Share Information
    Advertisement
    Click to comment

    You must be logged in to post a comment Login

    Leave a Reply