LATEST NEWS
ವಯನಾಡ್ – ನರಭಕ್ಷಕ ಹುಲಿ ಮೃತದೇಹ ಪತ್ತೆ
ತಿರುವನಂತಪುರಂ ಜನವರಿ 27: ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿ ಬಳಿ ಬುಡಕಟ್ಟು ಮಹಿಳೆಯೊಬ್ಬರನ್ನು ಕೊಂದು ಹಾಕಿದ್ದ ಹುಲಿ ಶವವಾಗಿ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ತಂಡವು ಶವವನ್ನು ಪತ್ತೆ ಮಾಡಿದೆ.
ಜನವರಿ 25ರಂದು ಮಾನಂದವಾಡಿಯ ಪ್ರಿಯದರ್ಶಿನಿ ಎಸ್ಟೇಟ್‌ನಲ್ಲಿ ಕಾಫಿ ಬೀಜ ಕೊಯ್ಯುತ್ತಿದ್ದ ಪರಿಶಿಷ್ಟ ಜಾತಿಯ 47 ವರ್ಷದ ಮಹಿಳೆ ರಾಧಾ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲೇ ಅರಣ್ಯ ಕಚೇರಿ ಮುಂದೆ ಜಮಾಯಿಸಿದ್ದ ಸ್ಥಳೀಯರು ಹುಲಿಯನ್ನು ಕೊಂದು ಹಾಕಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಜನವರಿ 26 ರಂದು ಕೇರಳ ಅರಣ್ಯ ಇಲಾಖೆಯ ರಾಪಿಡ್ ರೆಸ್ಪಾನ್ಸ್ ಟೀಮ್ (ಆರ್‌ಆರ್‌ಟಿ) ಅಧಿಕಾರಿಯೊಬ್ಬರು ಹುಲಿ ದಾಳಿಯಿಂದ ಗಾಯಗೊಂಡಿದ್ದರು.
ಪಂಚರಕೊಲ್ಲಿ ಗ್ರಾಮದ ಪ್ರಿಯದರ್ಶಿನಿ ಎಸ್ಟೇಟ್ ಬಳಿಯ ಪಿಲಕಾವು ಅರಣ್ಯದೊಳಗೆ ಮುಂಜಾನೆ 2:30ರ ಸುಮಾರಿಗೆ ಹುಲಿ ಸತ್ತಿರುವುದು ಆರ್‌ಆರ್‌ಟಿಗೆ ಪತ್ತೆಯಾಗಿದೆ. ಈ ಪ್ರಾಣಿಯನ್ನು ಇನ್ನೊಂದು ಹುಲಿ ಕೊಂದಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೂಲ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಈ ಮೊದಲು ಹುಲಿ ದಾಳಿ ಹಿನ್ನಲೆ ಕೇರಳದ ವಯನಾಡ್‌ನ ಮಾನಂದವಾಡಿಯಲ್ಲಿ ಕೇರಳ ಸರ್ಕಾರ ಕರ್ಪ್ಯೂ ವಿಧಿಸಿತ್ತು, ವಿಭಾಗ-1 (ಪಂಚರಕೊಲ್ಲಿ), ವಿಭಾಗ-2 (ಪಿಲಕಾವು), ಮತ್ತು ಡಿವಿಷನ್-36ರ (ಚಿರಕ್ಕರ) ವ್ಯಾಪ್ತಿಯಲ್ಲಿ ಇಂದು (ಸೋಮವಾರ) ಬೆಳಿಗ್ಗೆ 6ರಿಂದ ಮುಂದಿನ 48 ಗಂಟೆಗಳವರೆಗೆ ಕರ್ಮ್ಯೂ ಅನ್ವಯಿಸುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳು, ಅಂಗನವಾಡಿಗಳು, ಮದರಸಾಗಳು ಮತ್ತು ಟ್ಯೂಷನ್ ಸೆಂಟರ್‌ಗಳು ಮುಚ್ಚಲ್ಪಟ್ಟಿರುತ್ತವೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಇದೀಗ ನರಭಕ್ಷಕ ಹುಲಿ ಸಾವನಪ್ಪಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.