National
ಫ್ಲೈಓವರ್ ಮಧ್ಯೆ ರೋಡಿನಲ್ಲಿ ಕುಳಿತು ಘರ್ಜಿಸಿದ ಹುಲಿರಾಯ

ಭೋಪಾಲ್: ಲಾಕ್ ಡೌನ್ ನಿಂದಾಗಿ ಜನ ಸಂಚಾರವಿಲ್ಲದೆ ಕಾಡು ಪ್ರಾಣಿಗಳು ನಾಡಿಗೆ ಆಗಮಿಸುತ್ತಿರುವುದು ಈಗ ಸರ್ವೆ ಸಾಮಾನ್ಯವಾಗಿದೆ. ಬಹುತೇಕ ಸಂದರ್ಭಗಳಲ್ಲಿ ಹೆಚ್ಚಾಗಿ ಚಿರತೆಗಳು ಕಾಡು ಬಿಟ್ಟು ನಾಡಿಗೆ ಆಗಮಿಸಿವೆ. ಆದರೆ ಇಲ್ಲಿ ಮಾತ್ರ ರಸ್ತೆಗೆ ಆಗಮಿಸಿದ್ದು ಹುಲಿ… ಪ್ಲೈಓವರ್ ಹತ್ತಿ ರಸ್ತೆ ಮಧ್ಯೆ ರಾಜಗಾಂಭೀರ್ಯದಿಂದ ಕುಳಿತುಕೊಂಡು ಘರ್ಜಿಸಿದೆ.
ಈ ಘಟನೆ ನಡೆದಿದ್ದು ಮಧ್ಯ ಪ್ರದೇಶದ ಸಿಯೋನಿ ಜಿಲ್ಲೆಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಪೆಂಚ್ ರಾಷ್ಟ್ರೀಯ ಉದ್ಯಾನದ ಬಫರ್ ವಲಯದೊಳಗೆ ಬರುವ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ. ಪೆಂಚ್ ರಾಷ್ಟ್ರೀಯ ಉದ್ಯಾನವನ ಇರುವುದರಿಂದ ಹುಲಿ ಅಲ್ಲಿಂದ ರಸ್ತೆಗೆ ಬಂದಿದೆ. ಈ ಸ್ಥಳದಲ್ಲಿ ಫ್ಲೈಓವರ್ ಕೆಲಸ ನಡೆಯುತ್ತಿದ್ದು, ಕತ್ತಲು ಇರುವುದರಿಂದ ಹುಲಿ ಬಂದಿದೆ ಎನ್ನಲಾಗಿದೆ.

ವಾಹನಗಳು ಸಂಚರಿಸುತ್ತಿದ್ದರೂ ಯಾವುದೇ ಭಯವಿಲ್ಲದೇ ಹುಲಿ ರಸ್ತೆ ಮಧ್ಯದಲ್ಲೇ ಬಂದು ಮಲಗಿದೆ. ನಡುರಸ್ತೆಯಲ್ಲಿ ಹುಲಿಯನ್ನು ಕಂಡು ಗಾಬರಿಯಾದ ವಾಹನ ಸವಾರರು ವಾಹನವನ್ನು ನಿಲ್ಲಿಸಿಕೊಂಡು ಹುಲಿ ಹೋಗುವವರೆಗೂ ಕಾದಿದ್ದಾರೆ. ಈ ವೇಳೆ ಹುಲಿ ಯಾರ ಮೇಲೂ ದಾಳಿ ಮಾಡಿಲ್ಲ. ಅಲ್ಲದೇ ಹುಲಿ ಕುಳಿತು ಜೋರಾಗಿ ಘರ್ಜನೆ ಹಾಕುತ್ತಿರುವುದನ್ನು ಸೆರೆಯಾದ ವಿಡಿಯೋದಲ್ಲಿ ಕಾಣಬಹುದು.
ಹುಲಿ ಕುಳಿತ ಪ್ರದೇಶವು ಪೆಂಚ್ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರದಲ್ಲಿದೆ. ಪೆಂಚ್ ರಾಷ್ಟ್ರೀಯ ಉದ್ಯಾನವನ ಹೆಚ್ಚಿನ ಸಂಖ್ಯೆಯ ಹುಲಿಗಳಿರುವ ತಾಣವಾಗಿದೆ. ಈಗ ಹುಲಿಗಳು ಮತ್ತು ಇತರ ವನ್ಯಜೀವಿಗಳ ಸುಲಭ ಸಂಚಾರಕ್ಕೆ ಅನುಕೂಲವಾಗಲಿ ಮತ್ತು ಅವುಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಿಯೋನಿ ಮತ್ತು ನಾಗ್ಪುರದ ನಡುವಿನ ಹೆದ್ದಾರಿಯಲ್ಲಿ ಫ್ಲೈಓವರ್ ಗಳನ್ನು ನಿರ್ಮಿಸಲಾಗುತ್ತಿದೆ.