MANGALORE
ಇಲ್ಲಿ ದೈವವೇ ಭಕ್ತರ ಮೇಲೆ ಬೆಂಕಿ ಎಸೆಯುವ ವಿಭಿನ್ನ ಸಂಪ್ರದಾಯ
ಮಂಗಳೂರು ಜನವರಿ 16: ಕರಾವಳಿಯ ಹೆಚ್ಚಿನ ದೈವಸ್ಥಾನಗಳಲ್ಲಿ ತೂಟೆದಾರ ಎಂಬುವುದು ಸಾಮಾನ್ಯವಾಗಿದೆ, ಅಂದರೆ ಎರಡು ಗುಂಪುಗಳ ಮಧ್ಯೆ ಉರಿಯುತ್ತಿರುವ ಬೆಂಕಿಯನ್ನು ಒಬ್ಬರ ಮೇಲೊಬ್ಬರಂತೆ ಎಸೆಯುವ ಸಂಪ್ರದಾಯ, ಜಾರಂದಾಯ ದೈವದ ನೇಮೋತ್ಸವ ಸಂದರ್ಭ ಈ ಸಂಪ್ರದಾಯವಿದ್ದು ಜಾರಂದಾಯನ ಬಂಡಿಯನ್ನು ಎಳೆದ ನಂತರ ಈ ತೂಟೆದಾರದ ಕ್ರಮ ನಡೆಯುತ್ತದೆ, ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅತ್ತೂರು ಕೊಡೆತ್ತೂರು ಗ್ರಾಮಸ್ಥರ ನಡುವೆ ನಡೆಯುವ ಈ ತೂಟೆದಾರ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದರೆ, ಕಟೀಲು ದೇವಳದ ಸಮೀಪದಲ್ಲಿ ಇರುವ ದೈವಸ್ಥಾನದಲ್ಲಿ ಮಾತ್ರ ಇದಕ್ಕೆ ಭಿನ್ನವಾದ ತೂಟೆದಾರ ಸಂಪ್ರದಾಯ ನಡೆಯುತ್ತದೆ, ಇದು ಇದೀಗ ಎಲ್ಲರ ಗಮನ ಸೆಳೆದಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಮೀಪದಲ್ಲಿನ ಅಜಾರು ಎಂಬ ಗ್ರಾಮದಲ್ಲಿ ಶ್ರೀ ಧೂಮಾವತಿ ದೈವಸ್ಥಾನವಿದ್ದು ಪ್ರತೀ ವರ್ಷ ಈ ದೈವದ ನೇಮೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ ಇಲ್ಲಿನ ವಿಶೇಷತೆ ಎಂದರೆ, ಎಲ್ಲಾ ಧಾರ್ಮಿಕ ಕ್ಷೇತ್ರದಲ್ಲಿ ಎರಡು ಗುಂಪುಗಳ ಮಧ್ಯೆ ತೂಟೆದಾರ ನಡೆದರೆ ಇಲ್ಲಿ ದೈವವೇ ಭಕ್ತರ ಮೇಲೆ ಬೆಂಕಿ ಎಸೆಯುವ ಮೂಲಕ ತೂಟೆದಾರ ನಡೆಯುತ್ತದೆ, ನೇಮೋತ್ಸವದ ಕಟ್ಟಳೆಗಳು ನಡೆಯುತ್ತಿರುವಂತೆ, ದೈವದ ಬಂಡಿಯನ್ನು ಎಳೆಯುವ ಸಂಪ್ರದಾಯವಿದ್ದು, ಶ್ರೀ ಧೂಮಾವತಿ ಮತ್ತು ಬಂಟ ದೈವಗಳು ಬಂಡಿಯೊಂದಿಗೆ, ದೈವಸ್ಥಾನದ ಹೊರಗೆ ಬಂದು, ದೈವದ ಬಂಡಿ ಎಳೆದು ನಂತರ ತೂಟೆದಾರ ಪ್ರಾರಂಭವಾಗುತ್ತದೆ, ಬಂಟ ದೈವವು ಉರಿಯುತ್ತಿರುವ ತೂಟೆಯನ್ನು ಭಕ್ತರ ಮೇಲೆ ಎಸೆಯುತ್ತದೆ,
ಭಕ್ತರು ಅತ್ತಿಂದಿತ್ತ ಓಡುವಾಗ ಭಕ್ತರನ್ನು ಅಟ್ಟಾಡಿಸಿಕೊಂಡು ಬಂಟ ದೈವ ಭಕ್ತರಿಗೆ ಬೆಂಕಿಯನ್ನು ಎಸೆಯುತ್ತದೆ, ಈ ತಗುಲಿ ಸುಟ್ಟ ಗಾಯವಾದರೆ ದೈವದ ಪ್ರಸಾದವೇ ಇದಕ್ಕೆ ಔಷದಿಯಾಗಿದೆ, ಇದು ಈ ದೈವಸ್ಥಾನದ ಸಂಪ್ರದಾಯವಾಗಿದ್ದು, ಊರಿಗೆ ಬರುವ ಯಾವುದೇ ತೊಂದರೆಗಳು ಇದರಿಂದ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಹಿರಿಯರ ಕಾಲದಿಂದಲೂ ಬಂದಿದ್ದು ಆದರಿಂದ ಈ ಸಂಪ್ರದಾಯ ಈಗಲೂ ನಡೆದುಕೊಂಡು ಬರುತ್ತಿದೆ.