Connect with us

KARNATAKA

ಮಠಕ್ಕೆ ಸೇರಿದ ಆನೆಯನ್ನೇ ಕದಿಯಲು ಯತ್ನಿಸಿದ ಐನಾತಿ ಕಳ್ಳರು!

ತುಮಕೂರು,ಜನವರಿ 02: ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ ಎಂಬ ಆಡುಮಾತಿದೆ  ಹಾಗೆ ಅಡಿಕೆ ಕದಿಯುವಷ್ಟು ಸುಲಭವಾಗಿ ಆನೆ ಕದಿಯುವುದು ಸಾಧ್ಯವಿಲ್ಲ. ಆದರೆ, ಇಲ್ಲೊಂದಷ್ಟು ಐನಾತಿ ಕಳ್ಳರು ಆನೆಯನ್ನೇ ಕದ್ದು ಮಾರಾಟ ಮಾಡಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ತುಮಕೂರಿನ ಹೃದಯ ಭಾಗದಲ್ಲಿರುವ ಕರಿಬಸವಸ್ವಾಮಿ ಮಠದ ಆನೆ ಲಕ್ಷ್ಮಿಯನ್ನು ಕದಿಯಲು ಪ್ರಯತ್ನ ನಡೆದಿದೆ. ಕಳ್ಳರ ಈ ಕೃತ್ಯಕ್ಕೆ ಅರಣ್ಯ ಇಲಾಖೆ ಕೂಡ ಸಾಥ್ ನೀಡಿದೆ ಎಂಬ ಆರೋಪಗಳು ಕೇಳಿಬಂದಿವೆ. ತುಮಕೂರಿನ ಹೊರಪೇಟೆಯಲ್ಲಿರುವ ಕರಿಬಸವಸ್ವಾಮಿ ಮಠದಲ್ಲಿ ಸುಮಾರು 29 ವರ್ಷಗಳಿಂದಲೂ ಲಕ್ಷ್ಮಿಯನ್ನು ಕಾನೂನುಬದ್ಧವಾಗಿ ಅನುಮತಿ ಪಡೆದು ಸಾಕಲಾಗುತ್ತಿದೆ. ಸದ್ಯದ ಮಟ್ಟಿಗೆ ತುಮಕೂರಿನಲ್ಲಿ ಲಕ್ಷ್ಮಿ ಹೊರತುಪಡಿಸಿದರೆ ಬೇರೆ ಸಾಕಿದ ಆನೆ ಇಲ್ಲ. ಹೀಗಾಗಿ ಯಾವುದೇ ಹಬ್ಬ-ಹರಿದಿನ, ಜಾತ್ರೆಗಳು ನಡೆದರೆ ಲಕ್ಷ್ಮಿಗೆ ಭಾರೀ ಬೇಡಿಕೆ.

ನಿರೂಪದ್ರವಿ ಹಾಗೂ ಸೌಮ್ಯ ಸ್ವಭಾವದ ಲಕ್ಷ್ಮಿ ಬಗ್ಗೆ ತುಮಕೂರಿನ ಜನರಲ್ಲಿ ಭಕ್ತಿ, ಪ್ರೀತಿಯ ಭಾವನಾತ್ಮಕ ಸಂಬಂಧವಿದೆ. ಈ ರೀತಿಯ ಸೌಮ್ಯ ಆನೆಯನ್ನು ಪಳಗಿಸಿ ಸರ್ಕಸ್‍ನಲ್ಲಿ ಬಳಸಿಕೊಳ್ಳುವುದು ಸುಲಭ ಎಂಬ ಕಾರಣಕ್ಕಾಗಿ ಆನೆ ಕದಿಯುವ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ.

ಕಳೆದ ತಿಂಗಳು ಅರಣ್ಯ ಇಲಾಖೆ ಅಧಿಕಾರಿಗಳು ಮಠಕ್ಕೆ ಭೇಟಿ ನೀಡಿ ಆನೆಯ ಆರೋಗ್ಯ ತಪಾಸಣೆ ನಡೆಸಿ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ, ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಾರೆ. ಅದರ ಪ್ರಕಾರ, ಶಸ್ತ್ರ ಚಿಕಿತ್ಸೆಗಾಗಿ ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗಲು ಲಾರಿ ಮತ್ತು 8 ಜನ ಮಾವುತರನ್ನು ಕರೆತಂದಿದ್ದಾರೆ. ಆನೆಯನ್ನು ಮಠದಿಂದ ಸಾಗಿಸಲಾಗಿದ್ದು, ಬನ್ನೇರುಘಟ್ಟಕ್ಕೆ ತೆಗೆದುಕೊಂಡು ಹೋಗದೆ ಮಠದ ಮಾವುತರ ಮೇಲೆ ದಾಬಸ್‍ಪೇಟೆ ಬಳಿ ಹಲ್ಲೆ ಮಾಡಿ ಕೆಳಗಿಳಿಸಿ ಕಳುಹಿಸಲಾಗಿದೆ. ಅಲ್ಲಿಂದ ಕುಣಿಗಲ್‍ಗೆ ತೆರಳಿ ಆನೆಯನ್ನು ಹಳ್ಳಿಯೊಂದರಲ್ಲಿ ಬಚ್ಚಿಡಲಾಗಿದೆ. ಜೆಸಿಬಿಯಿಂದ ಆನೆ ಮೇಲೆ ಹಲ್ಲೆ ನಡೆಸಿರುವ ಆರೋಪಗಳು ಕೇಳಿಬಂದಿವೆ.

ಆನೆ ಸಾಗಾಣಿಕೆ ಮಾಡಲು ಗುಜರಾತ್ ಕಂಪೆನಿಗೆ ಸೇರಿದ ಲಾರಿಯನ್ನು ಬಳಸಿಕೊಳ್ಳಲಾಗಿತ್ತು. ಮಾವುತರು ಕೂಡ ಅದೇ ಕಂಪೆನಿಯವರು ಎಂದು ಹೇಳಲಾಗಿದೆ. ವಿಷಯ ತಿಳಿದ ಮಠದ ಆಪ್ತರು ಆನೆಯನ್ನು ಹುಡುಕಾಡಿ ಹಳ್ಳಿಯಲ್ಲಿ ಬಚ್ಚಿಟ್ಟಿದ್ದುದನ್ನು ಪತ್ತೆಹಚ್ಚಿದ್ದು, ಬೇರೊಂದು ಲಾರಿ ಮೂಲಕ ಅದನ್ನು ವಾಪಸ್ ಕರೆತಂದಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಸುಮಾರು 40 ಲಕ್ಷ ರೂ.ಗೂ ಹೆಚ್ಚು ಮೊತ್ತಕ್ಕೆ ಆನೆಯನ್ನು ಗುಜರಾತ್ ಕಂಪೆನಿಗೆ ಮಾರಾಟ ಮಾಡುವ ಪ್ರಯತ್ನ ನಡೆದಿತ್ತು ಎಂದು ತಿಳಿದುಬಂದಿದೆ.

Advertisement
Click to comment

You must be logged in to post a comment Login

Leave a Reply