KARNATAKA
ಹೆತ್ತವರಿಗೆ ಬೇಡವಾಗಿ ಬೀದಿ ಪಾಲಾದ ಈ ಮೂರು ಮಕ್ಕಳು ಈಗ ವಿದೇಶಿಗರ ಕಣ್ಮಣಿಗಳು..!
ಕೊಪ್ಪಳ: ಹೆತ್ತವರಿಗೆ ಬೇಡವಾಗಿ ಬೀದಿ ಪಾಲಾದ ಈ ಮೂರು ಹಣ್ಣು ಮಕ್ಕಳು ಈಗ ವಿದೇಶಿಗರ ಕಣ್ಮಣಿಗಳಾಗಿದ್ದಾರೆ. ಹೌದು ಕೊಪ್ಪಳದ ಈ ಮೂರು ಅನಾಥ ಹೆಣ್ಣು ಮಕ್ಕಳು ಇದೀಗ ಇಟಲಿ ದಂಪತಿಯ ಮಡಿಲು ಸೇರಿದ್ದಾರೆ.
ಇಟಲಿಯಲ್ಲಿ ನೆಲೆಸಿರುವ ಮಕ್ಕಳಿಲ್ಲದ ದಂಪತಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಈ ಮೂವರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದ್ದರಿಂದ ದತ್ತು ಪ್ರಕ್ರಿಯೆಯ ಕಾನೂನಿನಡಿ ಮೂವರು ಮಕ್ಕಳನ್ನು ಇಟಲಿಯ ದಂಪತಿಗೆ ನಿಯಮಾವಳಿಯಂತೆ ಜಿಲ್ಲಾಡಳಿತದಿಂದ ಹಸ್ತಾಂತರಿಸಲಾಯಿತು. ದತ್ತು ಪಡೆದ ದಂಪತಿ ಮೂವರು ಮಕ್ಕಳನ್ನು ಬೆಂಗಳೂರಿಗೆ ಕರೆದೊಯ್ದಿದ್ದು, ಅಲ್ಲಿಂದ ಇಟಲಿ ಕಡೆ ಪಯಣ ಬೆಳೆಸಲಿದ್ದಾರೆ.
2019ರಲ್ಲಿ ಕೊಪ್ಪಳ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಪೊಲೀಸರಿಗೆ ದೊರೆತ ಈ ಮೂವರು ಹೆಣ್ಣು ಶಿಶುಗಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿತ್ತು. ಆರಂಭದಲ್ಲಿ ಈ ಮಕ್ಕಳ ಪಾಲಕ-ಪೋಷಕರನ್ನು ಹುಡುಕುವ ಪ್ರಯತ್ನ ಸಾಕಷ್ಟು ಮಾಡಲಾಯಿತಾದರೂ ಫಲ ನೀಡಲಿಲ್ಲ. ಅಂತಿಮವಾಗಿ ದತ್ತು ಪ್ರಕ್ರಿಯೆ ಒಳಪಡಲು ಈ ಮಕ್ಕಳು ಅರ್ಹರಿದ್ದಾರೆ ಎಂದು ದೃಢಪಟ್ಟ ಬಳಿಕ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್‌ಎ)ಯಲ್ಲಿ ನೋಂದಣಿ ಮಾಡಲಾಯಿತು.
ಮೂವರು ಹೆಣ್ಣು ಮಕ್ಕಳು ಕೊಪ್ಪಳದ ದತ್ತು ಸಾಧ್ವಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ದತ್ತು ಕೇಂದ್ರದ ಸಿಬ್ಬಂದಿಯ ಜತೆ ಸಂತಸದಿಂದ ಕಾಲ ಕಳೆಯುತ್ತಿದ್ದರು. ಮೂವರು ಮಕ್ಕಳಲ್ಲಿ ಒಬ್ಬರನ್ನು ದತ್ತು ತೆಗೆದುಕೊಳ್ಳಲು ಕೆಲವರು ಮುಂದೆ ಬಂದರು. ಆದರೆ, ತಂದೆ-ತಾಯಿ ಪ್ರೀತಿಯಿಂದ ವಂಚಿತರಾದ ಮೂವರು ಮಕ್ಕಳನ್ನು ಅಗಲಿಸಬಾರದು ಎಂಬ ಚಿಂತನೆಯಿಂದ ಮೂವರು ಮಕ್ಕಳನ್ನೂ ಸಾಕುವ ದಂಪತಿಗೆ ದತ್ತು ಕೊಡುವ ತಿರ್ಮಾನ ಕೈಗೊಳ್ಳಲಾಯಿತು.