KARNATAKA
ಎರಡೂ ಕಡೆ ಬಿಜೆಪಿ ಸರ್ಕಾರವಿದ್ದರೂ ಜೀವಕ್ಕೆ ಬೆಲೆ ಇಲ್ಲ: ಹರ್ಷನ ಸಹೋದರಿ ಅಶ್ವಿನಿ
ಶಿವಮೊಗ್ಗ, ಅಕ್ಟೋಬರ್ 26: ಇತ್ತೀಚೆಗೆ ಹತ್ಯೆಯಾಗಿದ್ದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬದವರಿಗೆ ಗುಂಪೊಂದು ಜೀವಬೆದರಿಕೆ ಹಾಕಿದೆ ಎಂದು ತಿಳಿದುಬಂದಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಷನ ಸಹೋದರಿ ಅಶ್ವಿನಿ, ‘ಸೀಗೆಹಟ್ಟಿಯಲ್ಲಿನ ನಮ್ಮ ಮನೆಯ ಬಳಿ ಬಂದಿದ್ದ ಗುಂಪೊಂದು ಕೂಗಾಡಿ ಬೆದರಿಕೆ ಹಾಕಿದೆ. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೂ ನಮ್ಮ ಜೀವಕ್ಕೆ ಬೆಲೆ ಇಲ್ಲವಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.
‘ನಾವು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಗೃಹ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದರೂ ನಮಗೆ ರಕ್ಷಣೆ ಯಾವಾಗ ಸಿಗುತ್ತದೆ’ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮೆಗ್ಗಾನ್ ಆಸ್ಪತ್ರೆಗೆ ತೆರಳಿದ್ದ ಅಶ್ವಿನಿ, ಗುಂಪಿನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್.ಪಿ, ‘ಪ್ರಕರಣಗಳ ಗಂಭೀರತೆ ಆಧರಿಸಿ ತಪ್ಪು ಮಾಡಿದ ಎಲ್ಲರ ವಿರುದ್ಧವೂ ನಿಶ್ಚಿತವಾಗಿ ಕ್ರಮ ಕೈಗೊಳ್ಳುತ್ತೇವೆ’ ಎಂದರು. ಕೆಲವು ಮುಸ್ಲಿಂ ಗೂಂಡಾಗಳಿಗೆ ಸರ್ಕಾರ ಮತ್ತು ಪೊಲೀಸರ ಭಯ ಇಲ್ಲದಂತಾಗಿದೆ. ಶಿವಮೊಗ್ಗದಲ್ಲಿ ಪಿಎಫ್‌ಐ ಸಂಘಟನೆ ಇನ್ನೂ ಜೀವಂತವಾಗಿದೆಯೇ ಎಂಬುದನ್ನು ಪೊಲೀಸರು ಪತ್ತೆ ಮಾಡಬೇಕಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ನಗರದಲ್ಲಿ ನಡೆದ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹಲ್ಲೆಯನ್ನು ಯಾರು ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು ಎಂದರು.