LATEST NEWS
ತೆಕ್ಕಟ್ಟೆ – ಬೋನಿಗೆ ಬಿದ್ದ ಚಿರತೆ
ಕುಂದಾಪುರ ಮಾ.10: ಊರಿನ ಜನರಿಗೆ ತಲೆನೋವಾಗಿದ್ದ ಚಿರತೆಯನ್ನು ಕೊನೆಗೂ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ನಡೆದಿದೆ.
ಇಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಪಕ್ಕದ ತೋಪಿನಲ್ಲಿ ಅರಣ್ಯ ಇಲಾಖೆಯಿಟ್ಟ ಬೋನಿನಲ್ಲಿ ಗಂಡು ಚಿರತೆ ಶುಕ್ರವಾರ ಬೆಳಿಗ್ಗೆ ಸೆರೆಯಾಗಿದ್ದು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.
ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಮಮತಾ ದೇವಾಡಿಗರ ಪತಿ ಸುರೇಶ್ ದೇವಾಡಿಗರ ನಿವಾಸದ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಸಮೀಪದ ಶಾಲೆಗೆ ಬರುವ ವಿದ್ಯಾರ್ಥಿಗಳು ಕೂಡ ಚಿರತೆ ಕಾಟದಿಂದ ಭಯಭೀತರಾಗಿದ್ದರು. ನಿರಂತರ ಈ ಭಾಗದಲ್ಲಿ ಚಿರತೆ ಕಾಟವಿದ್ದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು ಅರಣ್ಯ ಇಲಾಖೆ ಬೋನ್ ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಒಂದೂವರೆ ತಿಂಗಳ ಹಿಂದೆ ಬೋನು ಇಡಲಾಗಿದ್ದು, ಅಂದಾಜು 4-5 ವರ್ಷ ಪ್ರಾಯದ ಗಂಡು ಚಿರತೆ ಸೆರೆಯಾಗಿದೆ.