Connect with us

    LATEST NEWS

    ಪತಿಗೆ 2ನೇ ಮದುವೆ ಮಾಡಿಸಿದ ಪತ್ನಿ! ಕಾರಣ ತಿಳಿದ್ರೆ ನಿಮ್ಮ ಹುಬ್ಬೇರುವುದು ಗ್ಯಾರೆಂಟಿ

    ಹೈದರಾಬಾದ್: ಸಾಮಾನ್ಯವಾಗಿ ಗಂಡ ಏನೇ ಮಾಡಿದರೂ ಹೆಂಡತಿ ಸಹಿಸಿಕೊಳ್ಳುತ್ತಾಳೆ. ತನ್ನ ಗಂಡನ ಜೀವನದಲ್ಲಿ ಇನ್ನೊಬ್ಬ ಮಹಿಳೆ ಪ್ರವೇಶಿಸುವುದನ್ನು ಯಾವುದೇ ಹೆಂಡತಿ ಕೂಡ ಸಹಿಸುವುದಿಲ್ಲ. ಆದರೆ, ಇಲ್ಲೊಬ್ಬ ಮಹಿಳೆ ಇದಕ್ಕೆ ತದ್ವಿರುದ್ಧವಾಗಿದ್ದಾರೆ.

    ಹೌದು, ಪತಿಗೆ ಇಷ್ಟವಾದ ಮತ್ತೊಬ್ಬ ಯುವತಿಯನ್ನು ತಾನೇ ಮುಂದೆ ನಿಂತು ವಿವಾಹ ಮಾಡಿಸಿದ್ದಾಳೆ. ಬಹುಶಃ ಮಕ್ಕಳು ಇಲ್ಲದಿದ್ದಕ್ಕೆ ಮದುವೆ ಮಾಡಿರಬಹುದು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ, ದಂಪತಿಗೆ ಮಗು ಇದೆ. ಆದಾಗ್ಯೂ, ಈ ಮಹಿಳೆ ತನ್ನ ಪತಿಗೆ ಎರಡನೇ ಮದುವೆ ಮಾಡಿಸಿದ್ದಾಳೆ. ಅಷ್ಟಕ್ಕೂ ಆಕೆ ಈ ರೀತಿ ಏಕೆ ಮಾಡಿದಳು ಎಂಬುದು ನಿಮಗೆ ತಿಳಿದರೆ ನೀವು ಖಂಡಿತ ಆಶ್ಚರ್ಯಪಡುತ್ತೀರಿ. ಈ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಮೆಹಬೂಬಾಬಾದ್ ಜಿಲ್ಲೆಯ ಸುರೇಶ್ ಹಾಗೂ ಸರಿತಾ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ಗಂಡು ಮಗುವಿದೆ. ಅದೇ ಸಮಯದಲ್ಲಿ ಸುರೇಶ್ಗೆ ಸಂಧ್ಯಾ ಎಂಬ ಯುವತಿ ಮೇಲೆ ಲವ್ ಆಗಿದೆ. ಸಂಧ್ಯಾ, ಮಾನಸಿಕ ಅಸ್ವಸ್ಥೆ. ಸಂಧ್ಯಾ ಅವರ ತಂದೆ ತಾಯಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈಕೆ ಎರಡನೇ ಮಗಳು. ಮೊದಲ ಮಗಳಿಗೆ ಈಗಾಗಲೇ ಮದುವೆಯಾಗಿದೆ. ಈ ಸಂಧ್ಯಾ, ಸುರೇಶ್ ಅವರ ಸಂಬಂಧಿಕರ ಮಗಳು. ಸುರೇಶ್ ಮದುವೆಯಾಗಿರುವುದು ಗೊತ್ತಿದ್ದರೂ ಸಂಧ್ಯಾ ಕೂಡ ಆತನನ್ನು ಇಷ್ಟಪಟ್ಟಿದ್ದಳು.

    ಸಂಧ್ಯಾ ಮಾನಸಿಕ ಅಸ್ವಸ್ಥೆಯಾಗಿರುವುದರಿಂದ ಆಕೆಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಿದರೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಹೀಗಾಗಿ ಸುರೇಶನ ಜತೆ ಮದುವೆ ಮಾಡಲು ಬಯಸಿದ್ದರು. ಇದಕ್ಕೆ ಪತ್ನಿ ಸರಿತಾ ಕೂಡ ಒಪ್ಪಿಕೊಂಡಿದ್ದು ಇಲ್ಲಿನ ಅಚ್ಚರಿಯ ಸಂಗತಿ. ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಸುರೇಶ್, ಸಂಧ್ಯಾಳನ್ನು ಶಾಸ್ತ್ರೋಕ್ತವಾಗಿ ವರಿಸಿದ್ದಾರೆ.

    ಪತಿಗೆ ಎರಡನೇ ಮದುವೆ ಮಾಡಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸರಿತಾ, ನನ್ನ ಗಂಡ ಎರಡನೇ ಮದುವೆ ಬಗ್ಗೆ ಕೇಳಿದಾಗ ಮಾನವೀಯ ಹೃದಯದಿಂದ ನಾನಿದನ್ನು ಮಾಡಿದ್ದೇನೆ. ಸಂಧ್ಯಾ ಕೂಡ ನನ್ನ ತಂಗಿಯಂತೆ ಎಂದು ಹೇಳಿದ್ದಾರೆ.

    ಸುರೇಶ್ ಮತ್ತು ಸಂಧ್ಯಾ ಅವರ ಮದುವೆ ಸಮಾರಂಭದಲ್ಲಿ ಸರಿತಾ ಸ್ವತಃ ಎಲ್ಲ ವ್ಯವಹಾರಗಳನ್ನು ನೋಡಿಕೊಂಡರು. ಅಲ್ಲದೇ ಸುರೇಶ್, ಸಂಧ್ಯಾಳ ಕುತ್ತಿಗೆಗೆ ತಾಳಿ ಕಟ್ಟುವಾಗಲೂ ಸರಿತಾ ಜತೆಯಲ್ಲೇ ಇದ್ದರು. ಸರಿತಾ ದಂಪತಿಯ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮದುವೆಗೆ ಸಂಬಂಧಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇಯಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply