Connect with us

    KARNATAKA

    ಮಂಗಳ ಗ್ರಹ ಈಗ ಅಂಗಾರಕ…!

    ಉಡುಪಿ, ಅಕ್ಟೋಬರ್ 13:  ಅಂಗಾರಕ ಎಂದರೆ ಕೆಂಪಗೆ ಕಾದ ಕೆಂಡ. ನಮ್ಮ ಹಿರಿಯರು ಮಂಗಳಗ್ರಹವನ್ನು ಅಂಗಾರಕವೆಂದು ಕರೆಯಲು ಕಾರಣ, ಈ ಗ್ರಹ ಕೆಂಪಾದ ಕ ಕೆಂಡದಂತೆ ಕಂಡುದರಿಂದಲೇ. ಮಂಗಳನಿಗೆ ಇನ್ನೊಂದು ಹೆಸರು ಲೋಹಿತಾಂಗ-ಕಾದ ಲೋಹದ (ಕಬ್ಬಿಣದ) ಮೈಯುಳ್ಳವನು ಅಂತ. ಅವರಿಗೆ ಕಾದ ಕಬ್ಬಿಣದಂತೆ ಕಂಡಿರಬಹುದು.
    ಈಗ ಅಕ್ಟೋಬರಿನ ಈ ವಾರವಂತೂ ಮಂಗಳಗ್ರಹ ಕಾದ ಕೆಂಡದಂತೆ ಕಾಣುತ್ತಿದ್ದಾನೆ.
    ಹೀಗೆ ಯಾವಾಗಲೂ ಕಾಣುವುದಿಲ್ಲ.
    ಮಂಗಳಗ್ರಹ ಸೂರ್ಯನಿಂದ ಸುಮಾರು 24 ಕೋಟಿ ಕಿಲೋಮಿಟರ್ ದೂರದಲ್ಲಿ ದೀರ್ಘವ್ರತ್ತಾಕಾರದಲ್ಲಿ ಸುತ್ತುತ್ತಿದ್ದರೂ, ಭೂಮಿಗೆ ಒಂದೇ ದೂರದಲ್ಲಿ ಕಾಣುವುದಿಲ್ಲ. ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ಸಮೀಪಿಸಿ ,ದೂರ ಸರಿದಂತೆ ಕಾಣುತ್ತಿರುತ್ತಾನೆ. ಸಮೀಪ ಬಂದಾಗ ಕೆಂಬಣ್ಣದಿಂದ ದೊಡ್ಡದಾಗಿ ಹೊಳೆದು ರಾತ್ರಿ ಇಡೀ ಆಕಾಶದಲ್ಲಿ ಎಲ್ಲರನ್ನೂ ಸೆಳೆಯುತ್ತಾನೆ. ಅಕ್ಟೋಬರ್ 13 ರಂದು ಭೂಮಿಗೆ ಸಮೀಪ 6 ಕೋಟಿ 20 ಲಕ್ಷ ಕಿ.ಮಿ ದೂರದಲ್ಲಿದ್ದು , ಈ ವಾರವಿಡೀ ಸುಂದರವಾಗಿ ಬರಿಗಣ್ಣಿಗೆ ಗೋಚರಿಸಲಿದ್ದಾನೆ. ಇದಕ್ಕೆ ಮಾರ್ಸ್ ಒಪೋಸಿಷನ್ (ಮಂಗಳನ ವಿಯುತಿ) ಎನ್ನುತ್ತಾರೆ. ಆದರೆ 2021 ಡಿಸೆಂಬರ್ ಸಮಯಕ್ಕೆ ಭೂಮಿಯಿಂದ ಸುಮಾರು 39 ಕೋಟಿ ಕಿ.ಮಿ ದೂರದಲ್ಲಿದ್ದು ಕಂಡೂ ಕಾಣದಂತಿರುತ್ತಾನೆ. ಹಾಗಾಗಿ ನಮ್ಮ ಹಿರಿಯರು ಹೀಗೆ ಹತ್ತಿರ ಬಂದಾಗ ನೋಡಿ ಖುಷಿಪಟ್ಟು ಅಂಗಾರಕ,ಲೋಹಿತಾಂಗ ಎಂಬ ನಾಮಕರಣ ಮಾಡಿರಬೇಕು.
    ಪ್ರತೀ 2 ವರ್ಷ 2 ತಿಂಗಳಿಗೊಮ್ಮೆ ಹೀಗೆ ಹತ್ತಿರಬಂದರೂ ,ಅಕ್ಟೋಬರ್ 13 ಬರುವ ದೂರದಲ್ಲಿ ಪುನಹ ಬರುವುದು 2035 ಕ್ಕೆ ಮಾತ್ರ. ಈ ಹಿಂದೆ 2003 ರಲ್ಲಿ,2018 ರಲ್ಲಿ ಹೀಗೆ ಕಂಡಿದೆ.
    ಆಕಾಶದ ಅದ್ಬುತಗಳನ್ನ ನೋಡಿ ಸವಿಯಬೆಕಷ್ಟೆ.

    ಆಶ್ಚರ್ಯವೆಂದರೆ ಸೌರವ್ಯೂಹದ ಬೇರಾವ ಗ್ರಹವೂ ಈ ಬಣ್ಣದಿಂದ ಕಾಣುವುದಿಲ್ಲ. ಹಾಗಾದರೇ ಮಂಗಳನ ಈ ಕೆಂಬಣ್ಣಕ್ಕೆ ಕಾರಣವೇನು? ಅದೇನು ಉರಿಯುವ ಕೆಂಡವೇ? ಎಂಬ ಪ್ರಶ್ನೆಗೆ ಇತ್ತೀಚಿಗೆ ಮಂಗಳಗ್ರಹವನ್ನು ತಲುಪಿ ಅದ್ಯಯನ ಮಾಡಿದ ಕ್ರತಕ ಉಪಗ್ರಹಗಳು ವಿವರಣೆ ಕೊಟ್ಟಿವೆ.
    ಇದೇನೂ ಉರಿಯುವ ಗೋಲವಲ್ಲ. ವಾತಾವರಣವಿಲ್ಲದ ಈ ಗ್ರಹದ ಮೇಲಿನ ಕಬ್ಬಿಣದ ಆಕ್ಸೈಡ್ ನ ಹುಡಿಗಳ ಧೂಳು, ಸೂರ್ಯನ ಬೆಳಕನ್ನು ಹೀರಿ ಕೆಂಬಣ್ಣವನ್ನು ಹೊರಸೂಸುವುದೇ ಕಾರಣ.

    ಸೂರ್ಯನ ಸುತ್ತ ಸುತ್ತುವ ಗ್ರಹಗಳಲ್ಲಿ ಮಂಗಳನ ವರೆಗಿನ ನಾಲ್ಕು ಗ್ರಹಗಳು ಬುಧ,ಶುಕ್ರ,ಭೂಮಿ ಹಾಗು ಮಂಗಳ ಒಂದು ರೀತಿ ಗಟ್ಟಿ ಗ್ರಹಗಳು. ನಂತರದ ಗುರು,ಶನಿ,ಯುರೇನಸ್ ಹಾಗೂ ನೆಪ್ಚೂನ್ ಧೂಳಿನಿಂದಾವೃತವಾದ ಹಗುರಗ್ರಹಗಳು.ಶನಿಗ್ರಹ ಭೂಮಿಗಿಂತ ಸುಮಾರು 800 ಪಟ್ಟು ದೊಡ್ಡದಾಗಿದ್ದರೂ, ಅದೇನಾದರೂ ಭೂಮಿಗೆ ಬಿದ್ದರೆ ಶಾಂತಸಾಗರದಲ್ಲಿ ತೇಲಾಡುತ್ತದೆ. ಶನಿ ಗ್ರಹ ಅಷ್ಟು ಹಗುರ.ಅದರ ಸಾಂದ್ರತೆ ಅಷ್ಟು ಕಡಿಮೆ.

    ಬರಿಗಣ್ಣಿಗೆ ಕಾಣುವ ಗ್ರಹಗಳು,ಅದರಲ್ಲೂ ಶುಕ್ರ,ಮಂಗಳ,ಗುರು,ಶನಿ,ಯಾವಾಗಲೂ ನಮಗೆ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ.ಅವು ಸೂರ್ಯನಿಂದ ಸುಮಾರು ಒಂದೇ ದೂರದಲ್ಲಿದ್ದರೂ,ಭೂಮಿಯಿಂದ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ದೂರದಲ್ಲಿರುತ್ತವೆ.ಗುರು,ಶನಿ ವರ್ಷಕ್ಕೊಮ್ಮೆ ಭೂಮಿಗೆ ಸಮೀಪ (ಕೆಲ ಕೋಟಿ ಕಿ.ಮಿ) ಬರುತ್ತವೆ. ಆಗ ಅವುಗಳು ಭೂಮಿಯಿಂದ ಸೂರ್ಯನಿಗೆ ವಿರುದ್ದ ದಿಕ್ಕಿನಲ್ಲಿ ಅಂದರೆ ಸೂರ್ಯ ಭೂಮಿ ಗುರು ಈ ರೀತಿ ನೇರ ಬಂದು ಭೂಮಿಗೆ ಸಮೀಪವಾಗುತ್ತವೆ.ಇದನ್ನು ಅವುಗಳ ಒಪೋಸಿಷನ್ ಎನ್ನುತ್ತಾರೆ. ಈ ವರ್ಷ ಜುಲೈ 14 ರಂದು ಗುರುಗ್ರಹದ ಒಪೋಸಿಷನ್ ಹಾಗೂ ಜುಲೈ ಜುಲೈ 20 ರಂದು ಶನಿಗ್ರಹದ ಒಪೋಸಿಷನ್.ವರ್ಷದ ಬೇರೆಲ್ಲ ಕಾಲಗಳಿಗಿಂತ ಈ ಸಮಯ ,ಆ ಗ್ರಹಗಳು ಸಮೀಪ ಬರುವುದರಿಂದ ಬಲುಚೆಂದ.

    ಮಂಗಳ ಗ್ರಹದ ವಿಶೇಷಗಳು:-
    1) ಸೂರ್ಯನಿಂದ ಭೂಮಿ ಸುಮಾರು 15 ಕೊಟಿ ಕಿ.ಮಿ. ಆದರೆ ಮಂಗಳ ಗ್ರಹ ಸುಮಾರು 24 ಕೋಟಿ ಕಿ.ಮಿ.
    2) ಭೂಮಿಯ ವ್ಯಾಸಕ್ಕಿಂತ ಮಂಗಳನ ವ್ಯಾಸ ಸುಮಾರು ಅರ್ದದಷ್ಟು. ಗಾತ್ರ ಭೂಮಿಯ ಗಾತ್ರಕ್ಕಿಂತ ಸುಮಾರು 0.1 ರಷ್ಟು . ಅಂದರೆ ಭೂಮಿಯ ಹೊಟ್ಟೆ ಕಾಲಿಯಾಗಿದ್ದರೆ 6 ಮಂಗಳಗ್ರಹವನ್ನು ಭೂಮಿಯಲ್ಲಿ ತುಂಬಬಹುದು.
    3) ಮಂಗಳಗ್ರಹದ ದ್ರವ್ಯರಾಶಿ ಭೂಮಿಯ ಸುಮಾರು ಹತ್ತನೇ ಒಂದರಷ್ಟು. ಹಾಗಾಗಿ ಹಾಗಾಗಿ 100 ಕೆಜಿ ತೂಕದ ವ್ಯಕ್ತಿ ಮಂಗಳನಲ್ಲಿ ಬರೇ 38 ಕೆಜಿ. ಭೂಮಿಯಲ್ಲಿ 1 ಮೀಟರ್ ಹೈಜಂಪ್ ಮಾಡುವ ವ್ಯಕ್ತಿ ,ಅಲ್ಲಿ ಅದು 3 ಮೀಟರ್ ಆಗುತ್ತದೆ.
    4) ಭೂಮಿಗೆ ಸೂರ್ಯನನ್ನೊಮ್ಮೆ ಸುತ್ತಲು 365 ದಿನಗಳು ಬೇಕಾದರೆ ಮಂಗಳನಿಗೆ 687 ದಿನಗಳು. ತನ್ನ ಅಕ್ಷದಲ್ಲಿ ಒಮ್ಮೆ ಸುತ್ತಲು ಭೂಮಿಗೆ 23 ಗಂಟೆ 56 ನಿಮಿಷಗಳಾದರೆ ಮಂಗಳನಲ್ಲಿ 24 ಗಂಟೆ 37 ನಿಮಿಷವಷ್ಟೆ. ದಿನಗಳು,ಋತುಗಳು,ಸರಿ ಸುಮಾರು ಒಂದೇ ರೀತಿ. ಭೂಮಿ ತನ್ನ ಅಕ್ಷದಲ್ಲಿ 23.5 ಡಿಗ್ರಿ ವಾಲಿಕೊಂಡಿದ್ದರೆ, ಮಂಗಳಗ್ರಹ ಅಕ್ಷಕ್ಕೆ 25 ಡಿಗ್ರಿ ವಾಲಿಕೊಂಡಿದೆ.
    5 ) ಮಂಗಳಗ್ರಹ ಸೂರ್ಯ ನಿಂದ, ಭೂಮಿಗಿಂತ , ದೂರವಿರುವುದರಿಂದ , ಅಲ್ಲಿಗೆ ಸೂರ್ಯನ ಬೆಳಕು ಬರೇ ಭೂಮಿಗೆ ಬರುವ ಬೆಳಕಿನ ಅರ್ದಕ್ಕಿಂತಲೂ ಕಡಿಮೆ(43%).
    6) ಎರಡೂ ಗ್ರಹಗಳಲ್ಲಿ ಗುಡ್ಡ ಬೆಟ್ಟಗಳಿದ್ದರೂ ಮಂಗಳನ ಅತ್ಯಂತ ಎತ್ತರದ ಪರ್ವತ( ಜ್ವಾಲಾಮುಖಿ ಪರ್ವತ-( ಒಲಿಂಪಸ್ ಮೋನ್) ನಮ್ಮ ಎವರೆಸ್ಟ್ ಗಿಂತಲೂ ಮೂರುಪಟ್ಟು ಹೆಚ್ಚು ಎತ್ತರ (26 ಕಿಮಿ)
    7) ಮಂಗಳನಲ್ಲಿ ವಾತವರಣವೇ ಇಲ್ಲ ಎನ್ನಬಹುದು. ಭೂಮಿಯ ವಾತಾವರಣದ ನೂರನೇ ಒಂದರಷ್ಟು ಕಡಿಮೆ. ಈ ತೆಳು ವಾತಾವರಣದಲ್ಲಿ ಅತಿ ಹೆಚ್ಚು ( 95% ಅಂಶ ) ಇಂಗಾಲದ ಡೈ ಆಕ್ಸೈಡ್.
    8) ಬರಡು ಭೂಮಿಯ ಮಂಗಳನಲ್ಲಿ ದ್ರುವ ಪ್ರದೇಶಗಳಲ್ಲಿ ಘನೀಕೃತ ಬರ್ಫ (ಮಂಜುಗಡ್ದೆಯ ಪದರ) ಇದೆ. ಇದೇನಾದರೂ ಕರಗಿದರೆ, ಇಡೀ ಮಂಗಳ ಗ್ರಹದ ಮೇಲೆ 11ಮೀಟರ್ ಆಳದ ಸಮುದ್ರವನ್ನೆ ಸೃಷ್ಟಿಸಬಹುದು.
    9) ಮಂಗಳನಲ್ಲಿ ಸುಮಾರು 4000 ಕಿ ಮಿ ಉದ್ದದ,200 ಕಿ ಮಿ ಅಗಲದ, 78 ಕಿಮಿ ಆಳದ ಖಣಿವೆ ಇದೆ. ಇದು ಸೌರವ್ಯೂಹದಲ್ಲೇ ಅತೀ ಉದ್ದದ ಖಣಿವೆ.ಭೂಮಿಯಲ್ಲಿ ಬರೇ 400 ಕಿ ಮಿ ಉದ್ದದ ಗ್ರಾಂಡ್ ಕೆನನ್ ಅತೀ ಉದ್ದದು.
    10) ಭೂಮಿಯ ಸರಾಸರಿ ಉಷ್ಣತೆ 14 ಡಿಗ್ರಿ ಸೆಲ್ಸಿಯಸ್ ಆದರೆ ಮಂಗಳನಲ್ಲಿ ಮೈನಸ್ 63 ಡಿಗ್ರಿ ಸೆಲ್ಸಿಯಸ್.
    11) ಎರಡೂ ಗ್ರಹಗಳ ಒಳಪದರಗಳು ಸರಿಸುಮಾರು ಒಂದೇ ರೀತಿ.(ಮಂಗಳನನ್ನು ನಮ್ಮ ಹಿರಿಯರು ಭೂಮಿ ಪುತ್ರ ಎಂದು ಕರೆದಿದ್ದರು)
    12) ಅತೀ ತೆಳುವಾದ ವಾತಾವರಣ ಮಂಗಳನಲ್ಲಿರುವುದರಿಂದ ಸಾವಿರಾರು ಉಲ್ಕೆಗಳು ಬಿದ್ದು ದೊಡ್ಡ ದೊಡ್ಡ ಗುಳಿಗಳನ್ನು ಮಾಡಿವೆ. ಸುಮಾರು 43000 ಉಲ್ಕಾಪಾತದ ಗುಳಿಗಳಿವೆ.
    13) ಭೂಮಿಯಲ್ಲಿ ಸಕಲ ಜೀವ ಸಸ್ಯಜಾಲದ ಅಸ್ತಿತ್ವಕ್ಕೆ ಕಾರಣಗಳಲ್ಲಿ ಒಂದಾದ ಕಾಂತಕ್ಷೇತ್ರ ಮಂಗಳನಲ್ಲಿ ಇಲ್ಲವೇ ಇಲ್ಲ.ಆದರೂ ಸಸ್ಯಗಳಿಗೆ ಬೇಕಾದ ಮೂಲ ಅಂಶಗಳಾದ ಮೆಗ್ನೆಶಿಯಮ್, ಸೋಡಿಯಂ,ಪೊಟ್ಯಾಶಿಯಂ,ಹಾಗೂ ಕ್ಲೋರೀನ್ ಅಂತೆಯೇ ಮಿಥೇನ್ ಮಂಗಳಗ್ರಹದಲ್ಲಿದೆ.
    14) ಮಂಗಳನಲ್ಲಿ ಜೀವಿಗಳ ಅಸ್ತಿತ್ವಕ್ಕೆ ಪೂರಕವಾದ ಖನಿಜಗಳು,ಅಮ್ಲೀಯ ಹಾಗು ಉಪ್ಪಿನ ಅಂಶಗಳೂ ಇದೆಯೆಂದು ತಿಳಿದು ಬಂದಿದೆ.
    15) ಭೂಮಿಗೆ ಒಂದು ಚಂದ್ರನಾದರೆ,ಮಂಗಳನಿಗೆ ಚಿಕ್ಕ ಚಿಕ್ಕ ಎರಡು ಚಂದ್ರರು. ಫೋಬೋಸ್(22ಕಿ ಮಿ ವ್ಯಾಸ) ಡೆಮೋಸ್(12 ಕಿ ಮಿ ವ್ಯಾಸ)

    ಮಂಗಳನ ಅಧ್ಯಯನ :-
    1964 ರಿಂದಲೇ ಮಂಗಳನ ಅದ್ಯಯನಕ್ಕಾಗಿ ಕೃತಕ ಉಪಗ್ರಹಗಳನ್ನು ಹಾರಿಸಿದರೂ ಶೆ 60% ರಷ್ಟು ಸಫಲವಾಗಲಿಲ್ಲ.
    2018 ರ ಹೊತ್ತಿಗೆ ಸುಮಾರು 8 ಕೃತಕ ಉಪಗ್ರಹಗಳು (ಭಾರತದ ಮಂಗಳಯಾನ ಸೇರಿದಂತೆ) ಅದ್ಯಯನ ನಡೆಸುತ್ತಿವೆ.1960 ರಿಂದ ಇವತ್ತಿನ ವರೆಗೆ ಸುಮಾರು 56 ಕೃತಕ ಉಪಗ್ರಹಗಳು ಅದ್ಯಯನಕ್ಕೆ ತೆರಳಿದ್ದರೂ ಬರೇ 26 ಮಾತ್ರ ಸಫಲವಾಗಿವೆ.

    ಮಂಗಳನ ಅದ್ಯಯನಕ್ಕಾಗಿ 2 ವರ್ಷ 2 ತಿಂಗಳಿನ ಭೂಮಿಗೆ ಸಮೀಪವಾದ ಈಗನ ಕಾಲವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
    ರಷ್ಯಾ, ಅಮೇರಿಕ ಮಾತ್ರ ಮಂಗಳನ ಅಂಗಳದಲ್ಲಿ ಕೃತಕ ಉಪಗ್ರಹಗಳನ್ನು ಇಳಿಸಿ ಅದ್ಯಯನ ಮಾಡಿವೆ. ಯುರೋಪಿಯನ್ ಸ್ಪೇಸ್ ಎಜೆನ್ಸಿ ಮತ್ತು ಭಾರತ ಕೃತಕ ಉಪಗ್ರಹಗಳನ್ನು ಕಳುಹಿಸಿ ಮಂಗಳನ ಸುತ್ತಿ, ಅದ್ಯಯನ ನಡೆಸಿ ಯಶಸ್ಸನ್ನು ಕಂಡಿವೆ. ಪ್ರಥಮವಾಗಿ ಕಳುಹಿಸಿ ಯಶಸ್ಸು ಗಳಿಸಿದ್ದು ಭಾರತ ಮಾತ್ರ.
    2033 ರ ಹೊತ್ತಿಗೆ ಮಾನವನನ್ನು ಮಂಗಳನ ಅಂಗಳದಲ್ಲಿ ಇಳಿಸಲು ನಾಸಾ ಪ್ರಯತ್ನ ಮಾಡುತ್ತಿದೆ.

    ಡಾ. ಎ. ಪಿ ಭಟ್, ಉಡುಪಿ.

    Share Information
    Advertisement
    Click to comment

    You must be logged in to post a comment Login

    Leave a Reply