BANTWAL
ಹೋಟೆಲ್ ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಹಣ ಇದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರಿಸಿದ ಹೋಟೆಲ್ ಮಾಲೀಕ
ಬಂಟ್ವಾಳ ಫೆಬ್ರವರಿ 08 : ಹೋಟೆಲ್ ಗೆ ಚಹಾ ಕುಡಿಯಲು ಬಂದು ಅಲ್ಲೇ ಬಿಟ್ಟು ಹೋಗಿದ್ದ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದು ಬ್ಯಾಗ್ ನ್ನು ವಾರಸುದಾರರಿಗೆ ಹಸ್ತಾಂತರ ಮಾಡಿ ಮಾನವೀಯತೆ ಮೆರೆದ ಘಟನೆ ಕಲ್ಲಡ್ಕದ ಕುದ್ರೆಬೆಟ್ಟು ಎಂಬಲ್ಲಿನ ಹೋಟೆಲ್ ಒಂದರಲ್ಲಿ ನಡೆದಿದೆ.
ತಮಿಳುನಾಡು ಮೂಲದ ವ್ಯಕ್ತಿಗಳು ಮಂಗಳೂರಿಗೆ ಕೆಲಸದ ನಿಮಿತ್ತ ಆಗಮಿಸಿ, ವಾಪಾಸು ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ನೂತನ ವಾಗಿ ಆರಂಭವಾದ ಸಮುದ್ರ ಹೋಟೆಲ್ ಗೆ ಚಹಾ ಕುಡಿಯಲು ಹೋಗಿದ್ದರು.
ಚಹಾ ಕುಡಿಯುವ ವೇಳೆ ಟೇಬಲ್ ಮೇಲೆ ಲಕ್ಷಾಂತರ ರೂ ನಗದು ಹಾಗೂ ಚಿನ್ನಾಭರಣವಿದ್ದ ಬ್ಯಾಗ್ ನ್ನು ಇಟ್ಟಿದ್ದರು.ಆದರೆ ಚಹಾ ಕುಡಿದ ಬಳಿಕ ಈ ಕುಟುಂಬ ಬ್ಯಾಗ್ ನ ಅರಿವಿಲ್ಲದ ಸೀದಾ ಕಾರು ಹತ್ತಿ ತೆರಳಿದ್ದರು. ಆದರೆ ಹೋಟೆಲ್ ಮಾಲಕ ಕರುಣಾಕರ ಶೆಟ್ಟಿ ಅವರು ಬ್ಯಾಗ್ ನ್ನು ಗಮನಿಸಿ ಸೇಫ್ ಆಗಿ ಇಟ್ಟಿದ್ದರು. ಜೊತೆಗೆ ಇದರಲ್ಲಿ ಕಂಡು ಬಂದ ಮೊಬೈಲ್ ಸಂಖ್ಯೆ ಯ ಮೂಲಕ ಬ್ಯಾಗ್ ಮಾಲಕರ ಪತ್ತೆ ಮಾಡವಲ್ಲಿ ಯಶಸ್ವಿಯಾದರು. ಅದಾಗಲೇ ಬ್ಯಾಗ್ ಮಾಲಕರು ಇದರ ಅರಿವಿಲ್ಲದ ಬೆಂಗಳೂರು ತಲುಪಿದ್ದರು. ಪೋನ್ ಕರೆಗೆ ಎಚ್ಚರಗೊಂಡ ಅವರು ಅಲ್ಲಿಂದಲೇ ವಾಪಾಸು ಬಂದು ಬ್ಯಾಗ್ ನ್ನು ಪಡೆದುಕೊಂಡಿದ್ದಾರೆ. ಹೋಟೆಲ್ ಮಾಲಕನ ಮಾನವೀಯ ಗುಣಗಳ ಬಗ್ಗೆ ಅವರು ಕೊಂಡಾಡಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಬ್ಯಾಗ್ ಸೇಫ್ ಆಗಿ ಪಡೆದ ಕುಟುಂಬ ಹೋಟೇಲ್ ಮಾಲಕರಿಗೆ ಗಿಪ್ಟ್ ನೀಡಲು ಮುಂದಾಗಿತ್ತು.ಆದರೆ ಹೋಟೆಲ್ ಮಾಲಕ ಎಲ್ಲವನ್ನು ನಿರಾಕರಣೆ ಮಾಡಿ ಅವರು ಉತ್ತಮ ರೀತಿಯಲ್ಲಿ ಉಪಚರಿಸಿ ವಾಪಾಸು ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ