Connect with us

BANTWAL

1974ರ ಮಹಾನೆರೆಗೆ 50 ವರ್ಷ – ನೇತ್ರಾವತಿ ಕುಮಾರಧಾರ ನದಿಯ ರೌದ್ರತೆಗೆ ನಿರ್ವಸಿತರಾಗಿದ್ದ ಸಾವಿರಾರು ಜನ

ಬಂಟ್ವಾಳ ಜುಲೈ 26: ಅದು 1974ನೇ ಇಸವಿ ಜುಲೈ ತಿಂಗಳ 26ನೇ ತಾರೀಕು. ಉಪ್ಪಿನಂಗಡಿಯೂ ಸೇರಿ ದ.ಕ. ಜಿಲ್ಲೆಯ ನೇತ್ರಾವತಿ ನದಿ ಪಾತ್ರದ ಜನತೆ ನೆರೆಗೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾದ ದಿನ. ಅದೊಂದು ಅತ್ಯಂತ ಕರಾಳ ದಿನ. 1974 ರ ಜುಲೈ 26 ರಂದು ಸುರಿದ ಅವ್ಯಾಹತ ಮಳೆಗೆ ನೇತ್ರಾವತಿ, ಕುಮಾರಧಾರ ಸೇರಿದಂತೆ ಜೀವನದಿಗಳು ಉಕ್ಕಿ ಹರಿದಿದ್ದವು. ಉಪ್ಪಿನಂಗಡಿ ಮತ್ತು ಬಂಟ್ವಾಳದಲ್ಲಿ ಮಹಾ ಪ್ರವಾಹವೇ ಉಂಟಾಗಿತ್ತು. 1923 ರಲ್ಲಿ ಸಂಭವಿಸಿದ ಮಹಾ ಪ್ರಳಯದ 50 ವರ್ಷಗಳ ನಂತರ 74 ರಲ್ಲಿ ಪ್ರವಾಹ ಮತ್ತೆ ಮರುಕಳಿಸಿತ್ತು. ಮಣ್ಣಿನ ಗೋಡೆಯ ಮನೆಗಳು ಸರ್ವ ನಾಶವಾಗಿದ್ದವು. ಅಕ್ಕಿ, ಭತ್ತ, ತೆಂಗಿನಕಾಯಿ, ಅವಲಕ್ಕಿ, ಬಟ್ಟೆಬರೆ, ಹಣ ಸೇರಿದಂತೆ ಅಮೂಲ್ಯ ವಸ್ತುಗಳು ನೀರುಪಾಲಾಗಿದ್ದವು. ನದಿಗಳ ಭೋರ್ಗರೆತಕ್ಕೆ ಸಿಲುಕಿ ಸಾವಿರಾರು ಜನ ನಿರ್ವಸಿತರಾದರು.


ಉಪ್ಪಿನಂಗಡಿ, ಬಂಟ್ವಾಳ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದವು, 3 ದಿನಗಳಿಂದ ಸುರಿಯುತ್ತಿದ್ದ ಮಳೆ, ಜುಲೈ 26 ರ ನಸುಕಿನ ಹೊತ್ತಿಗೆ ಮೇಘ ಸ್ಫೋಟದ ರೂಪ ತಳೆದ ಕಾರಣ ನದಿಗಳು ಉಕ್ಕೇರಿದ್ದವು.

ಉಪ್ಪಿನಂಗಡಿ ಹಳೆ ಸೇತುವೆಯ ಮಟ್ಟಕ್ಕೆ ನೀರು ಏರಿತ್ತು. 1923 ರ ಮಹಾ ಪ್ರವಾಹಕ್ಕೆ ಭರ್ತಿ 50 ವರ್ಷ ತುಂಬಿದ ಬಳಿಕ 1974 ರ ಪ್ರವಾಹ ಬಂದಿತ್ತು. ಈಗ 74 ರ ಪ್ರವಾಹಕ್ಕೆ 50 ವರ್ಷ ತುಂಬುತ್ತಿದೆ. ವಿಶೇಷವೆಂದರೆ 1974ರ ಜುಲೈ 26 ಶುಕ್ರವಾರವಾಗಿದ್ದರೆ, ಈ ವರ್ಷವೂ ಶುಕ್ರವಾರವೇ ಆಗಿದೆ.

1974 ರ ಜುಲೈ 25 ರಂದು ಮುಂಭಾಗದಲ್ಲಿ ಸಂಗಮಿಸಿ ಯಥಾಸ್ಥಿತಿಯನ್ನು ಕಾಯ್ದುಕೊಂಡ ನದಿಗಳು ರಾತ್ರಿಯಾಗುತ್ತಿದ್ದಂತೆ ಪೇಟೆಯನ್ನಾವರಿಸಿಕೊಂಡು ಪರಿಯಲಾರಂಭಿಸಿತು. ನಸುಕಿನ ವೇಳೆಯಿಂದ ಮುಂಜಾನೆಯವರೆಗೆ ತನ್ನ ಕರಾಳ ಮುಖವನ್ನು ತೋರಿಸಿದ ನದಿಗಳು ಉಪ್ಪಿನಂಗಡಿಯ  ಸ್ಮಶಾನದ  ಭಾಗದಿಂದ ಪೇಟೆಗೆ ನುಗ್ಗಿ ವೇಗವಾಗಿ ಹರಿಯುತ್ತಾ ಮಣ್ಣಿನ ಗೋಡೆಗಳಿಂದ ನಿರ್ಮಿತವಾಗಿದ್ದ ಕಟ್ಟಡಗಳನ್ನೆಲ್ಲಾ ನೋಡ ನೋಡುತ್ತಿದ್ದಂತೆಯೇ
ನೂರಾರು ಮಂದಿಯನ್ನು ನಿರ್ಗತಿಕರನ್ನಾಗಿಸಿದ ಮಹಾನರೆಯು ಜು.26ರಂದು ಸಾಯಂಕಾಲದಿಂದ ಇಳಿಮುಖ ಕಂಡಿತ್ತು.


ಪ್ರವಾಹ ಬಂದು ಬಹುತೇಕ ಉಪ್ಪಿನಂಗಡಿ ಪೇಟೆ ಕೊಚ್ಚಿ ಹೋಗಿತ್ತು. ಪ್ರವಾಹ ಇಳಿದ ಬಳಿಕ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಉಪ್ಪಿನಂಗಡಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮನೆ ಕಳೆದುಕೊಂಡವರಿಗೆ ಪುನರ್ವಸತಿ ನೀಡಲಾಗಿತ್ತು. ಉಪ್ಪಿನಂಗಡಿಯ ರಾಮನಗರ, ನೆಕ್ಕಿಲಾಡಿಗಳಲ್ಲಿ ನಿವೇಶನ ನೀಡಲಾಯಿತು. ಉಪ್ಪಿನಂಗಡಿಯಲ್ಲಿ 1974 ರಂದು ಸಂಜೆ ಸಂಗಮ ಉಂಟಾಗಿತ್ತು. ಶ್ರೀ ಸಹಸ್ರಲಿಂಗೇಶ್ವರ ದೇವಳ ದಲ್ಲಿ ಸಂಗಮ ಪೂಜೆ ನಡೆಸಲಾಗಿತ್ತು.

ಆ ಬಳಿಕ ಏರಿದ ನೀರು ಇಡೀ ಉಪ್ಪಿನಂಗಡಿ ಪೇಟೆಯನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಸಾವಿರಾರು ಸರಕಾರಿ ದಾಖಲೆಗಳು ನೀರು ಪಾಲಾಗಿ ಹೋಗಿತ್ತು. ಆ ಬಳಿಕವೇ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯಿಂದ ಪುತ್ತೂರಿಗೆ ತಾಲೂಕು ಕೇಂದ್ರವನ್ನು ಸ್ಥಳಾಂತರಿಸಲಾಗಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *