DAKSHINA KANNADA
ಅಪಘಾತ ತಪ್ಪಿಸಲು ಹೋಗಿ ಭಾರೀ ಗಾತ್ರದ ಟ್ರಕ್ಕನ್ನು ಕಮರಿಗೆ ಇಳಿಸಿದ ಚಾಲಕ

ಉಳ್ಳಾಲ, ಜನವರಿ 24: ಯಾವುದೇ ಸೂಚನೆ ನೀಡದೆ ನಿಲ್ಲಿಸಿದ ಕಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಸಲುವಾಗಿ ಭಾರೀ ಗಾತ್ರದ ಟ್ರಕ್ಕನ್ನು ಅದರ ಚಾಲಕ ಕಮರಿಗೆ ಚಲಾಯಿಸಿದ ಘಟನೆ ರಾ.ಹೆ.66ರ ತೊಕ್ಕೊಟ್ಟುವಿನಲ್ಲಿ ಇಂದು ನಡೆದಿದೆ.ಹೆದ್ದಾರಿಯಲ್ಲಿ ಯಾವುದೇ ಸೂಚನೆ ನೀಡದೆ ತಿರುವು ಪಡೆದ ಕಾರು ಚಾಲಕನ ಪ್ರಾಣ ಉಳಿಸಲು ಟ್ರಕ್ ಚಾಲಕ ಪ್ರಯತ್ನಿಸಿದಾಗ ಭಾರೀ ಗಾತ್ರದ ಟ್ರಕ್ ಕಮರಿಗೆ ಉರುಳಿದೆ.
ಪುಣೆಯಿಂದ ಕೇರಳದ ಕಾಸರಗೋಡಿಗೆ ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಭಾರೀ ಗಾತ್ರದ ಟ್ರಕ್ ಕಾಪಿಕಾಡು ಎರಡನೇ ಅಡ್ಡ ರಸ್ತೆಯ ರಾಜ್ ಕೇಟರರ್ಸ್ ಬಳಿಯ ಕಮರಿಗೆ ಉರುಳಿದೆ. ಇಂದು ಬೆಳಗ್ಗೆ ಘಟನೆ ನಡೆದಿದ್ದು, ತೊಕ್ಕೊಟ್ಟಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಟ್ರಕ್ ಕಾಪಿಕಾಡು ಎರಡನೇ ಅಡ್ಡ ರಸ್ತೆ ನಿವಾಸಿ ಆಲ್ಫ್ರೆಡ್ ಗಾಡ್ ಫ್ರೀ ಡಿಸೋಜ ಎಂಬವರು ಕಾರು ಚಲಾಯಿಸುತ್ತಿದ್ದರು.

ಕಾಪಿಕಾಡು ಎರಡನೇ ಅಡ್ಡ ರಸ್ತೆ ಬರುತ್ತಿದ್ದಂತೆ ಆಲ್ಪ್ರೆಡ್ ಅವರು ಯಾವುದೇ ಸೂಚನೆ ನೀಡದೆ ಕಾರನ್ನ ತಿರುಗಿಸಿದ್ದಾರೆನ್ನಲಾಗಿದ್ದು, ಇದರಿಂದ ವಿಚಲಿತನಾದ ಹಿಂಬದಿಯಿಂದ ಬರುತ್ತಿದ್ದ ಟ್ರಕ್ ಚಾಲಕ ಬಿಹಾರ ಮೂಲದ ರಮೇಶ್ ಕಾರಿಗೆ ಢಿಕ್ಕಿ ತಪ್ಪಿಸಲು ಟ್ರಕ್ಕನ್ನೇ ಕಮರಿಗೆ ಹಾಕಿದ್ದಾರೆ. ಟ್ರಕ್ ಕಮರಿಗೆ ಉರುಳಿದ ಸಂದರ್ಭ ರಸ್ತೆ ಬದಿಯಲ್ಲಿ ಇಬ್ಬರು ಪಾದಚಾರಿಗಳು ನಿಂತಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.